ಚಿಕ್ಕಮಗಳೂರು: ನಗರದ ಎಐಟಿ ಕಾಲೇಜು ಮುಂಭಾಗದಲ್ಲಿ ಜಿಲ್ಲಾಮಟ್ಟದ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣವಾಗುತ್ತಿದ್ದು, ಸದರಿ ಭವನಕ್ಕೆ ಸಂಬಂಧಪಟ್ಟ ಜಾಗವನ್ನು ಭೂಗಳ್ಳರು ಒತ್ತುವರಿ ಮಾಡಿದ್ದು ಇಲಾಖಾ ಅಧಿಕಾರಿಗಳು ಮೌನವಹಿಸಿ ಭೂಗಳ್ಳರೊಂದಿಗೆ ಶಾಮೀಲಾಗಿದ್ದು ಇವರ ಮೇಲೆ ಅಗತ್ಯ ಕ್ರಮ ಕೈಗೊಂಡು ಜಾಗ ಖುಲ್ಲಾ ಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮಹರ್ಷಿ ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಕೋಟೆ ಅವರು ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಸಮುದಾಯ ಭವನದ ಒಟ್ಟು ಜಾಗದ ವಿಸ್ತೀರ್ಣ ೨೬,೪೬೨.೭೧ ಚ.ಅಡಿ ವಿಸ್ತೀರ್ಣ ಇರುತ್ತದೆ. ಪ್ರಸ್ತುತ ನಿವೇಶನದಲ್ಲಿ ಭವನದ ಕಾಂಪೌಂಡ್ ಮತ್ತು ಇತರೆ ಕೆಲಸ ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿಯ ನಿಗಾವಣೆಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದರು.

ಕಾಂಪೌಂಡ್ ನಿರ್ಮಾಣ ಮಾಡಲು ಗುರುತು ಮಾಡಿರುವ ಜಾಗಕ್ಕೂ ಸಿಡಿಎ ವಿನ್ಯಾಸ ನಕ್ಷೆಯಲ್ಲಿರುವಂತೆ ಇರುವ ಜಾಗಕ್ಕೂ ಸರಿ ಸುಮಾರು ೨೭೦೦ ಅಡಿ ಒತ್ತುವರಿ ಕಂಡುಬಂದಿದೆ. ಜಾಗದ ಖಾತೆಯಂತೆ ಒತ್ತುವರಿಯಾಗಿರುವ ಪ್ರದೇಶವನ್ನು ಖುಲ್ಲಾ ಪಡಿಸಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಐಟಿಡಿಪಿ ಸಮನ್ವಯಾಧಿಕಾರಿಯಾದ ಶ್ರೀಮತಿ ಭಾಗೀರತಿ ರವರಿಗೆ ವಿನಂತಿಸಿದರೆ ಅದಕ್ಕೆ ಅವರು, ಮೂಲ ವಿನ್ಯಾಸ ನಕ್ಷೆ ನಿವೇಶನದ ಖಾತೆ ಅವೆಲ್ಲಾ ನನಗೆ ಗುರುತಿಲ್ಲ ಕೆಲಸ ನಡೆಯುತ್ತಿದೆ ನಾನು ಯಾರ ಮಾತು ಕೇಳಲ್ಲ ಎಂದು ಉಡಾಫೆಯಾಗಿ ಮಾತನಾಡುತ್ತಾರೆ ಎಂದು ಆರೋಪಿಸಿದರು.
ಸಿಡಿಎ ಪ್ರಾಧಿಕಾರವು ಕಾನೂನು ಬದ್ಧವಾಗಿ ೨೬,೪೬೨.೭೧ ಚ.ಅ.ಗೆ ಹಣ ಕಟ್ಟಿಸಿಕೊಂಡು ವಿನ್ಯಾಸ ನಕ್ಷೆಯಲ್ಲಿ ಜಾಗ ಗುರುತು ಮಾಡಿ ಇಲಾಖೆಯ ಹೆಸರಿಗೆ ದಿನಾಂಕ ೨೧-೮-೨೦೧೫ ರಲ್ಲಿ ಖಾತೆ ಮಾಡಿಸಿಕೊಟ್ಟಿರುತ್ತದೆ. ಪ್ರಸ್ತುತ ಈಗ ಜಾಗದ ಅಳತೆ ಅಂದಾಜು ೨೩,೦೦೦ ಅಡಿ ಇರಬಹುದೆಂದು ಗುಮಾನಿ ಇದೆ ಬಾಕಿ ಜಾಗ ಒತ್ತುವರಿಯಾಗುವುದಕ್ಕೆ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದೆ ಎಂದು ದೂರಿದರು.

ಸಮುದಾಯದ ಏಳಿಗೆ ಮತ್ತು ಬಳಕೆಗಾಗಿ ನಮ್ಮ ಸಂಘಟನೆಗಳು ನಿರಂತರ ಹೋರಾಟ ಮಾಡಿ ಸರ್ಕಾರದಿಂದ ಜಾಗ ಮಂಜೂರು ಮಾಡಿಸಿಕೊಂಡು ಸಮುದಾಯ ಭವನ ನಿರ್ಮಾಣಕ್ಕೆ ನಮ್ಮ ಸಮುದಾಯದ ಎಲ್ಲಾ ಮುಖಂಡರುಗಳ ಕೊಡುಗೆ ಬಹಳ ಇದೆ ಎಂದರು.

ಹೋರಾಟದ ಫಲವಾಗಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿದೆ. ಆದರೆ ಜಾಗ ಭೂಗಳ್ಳರಿಂದ ರಕ್ಷಣೆ ಮಾಡಲು ಯೋಜನಾ ಸಮನ್ವಯಾಧಿಕಾರಿ ಯವರು ಸಂಪೂರ್ಣ ವಿಫಲವಾಗಿ, ಭೂಗಳ್ಳರೊಂದಿಗೆ ಶಾಮೀಲಾಗಿರುವ ಅನುಮಾನವಿದೆ. ಇವರ ಈ ಧೋರಣೆಯಿಂದ ಸರ್ಕಾರಕ್ಕೆ ಲಕ್ಷಾಂತರ ರೂಗಳ ನ?ವಾಗಿದೆ ಎಂದು ಹೇಳಿದರು.

ತಕ್ಷಣ ಒತ್ತುವರಿಯಾದ ಬಗ್ಗೆ ಉನ್ನತಮಟ್ಟದ ತನಿಖೆ ಮಾಡಿ ಸಂಪೂರ್ಣ ಜಾಗ ಸರ್ವೆ ಮಾಡಿ ಒತ್ತುವರಿಯಾದ ಜಾಗವನ್ನು ಖುಲ್ಲಾ ಪಡಿಸಿ ಇಲಾಖೆಯ ವಶಕ್ಕೆ ತೆಗೆದಕೊಳ್ಳಬೇಕೆಂದು ಮತ್ತು ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

೧೫ ದಿನಗಳಲ್ಲಿ ನಿಮ್ಮಿಂದ ಏನು ಕ್ರಮ ಆಗದಿದ್ದರೆ ಉತ್ತರ ಏನು ಇಲ್ಲಾ ಎಂದು ತಿಳಿದು ಜಿಲ್ಲಾದ್ಯಾಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಛಿ ಈ ಸಂದರ್ಭದಲ್ಲಿ ದಸಂಸ ಅಣ್ಣಯ್ಯ, ಅಂಬೇಡ್ಕರ್ ಜನಜಾಗೃತಿ ಸಮಿತಿಯ ಮಂಜು ಕೂದುವಳ್ಳಿ, ಹುಣಸೇಮಕ್ಕಿ ಲಕ್ಷ್ಮಣ, ದಲಿತ ಸಂಘಟನೆ ರಾಜ್ಯ ಕಾರ್ಯದರ್ಶಿ ದಂಟರಮಕ್ಕಿ ಶ್ರೀನಿವಾಸ್, ಹರೀಶ್ ನಾಗಮ್ಮ, ಮಧುಕುಮಾರ್, ಉಮೇಶ್, ಪ್ರದೀಪ್, ವಿಜಯ್‌ಕುಮಾರ್, ಯತೀಶ್, ಲತಾ ಸೇರಿದಂತೆ ದಲಿತ ಜನಜಾಗೃತಿ ವೇದಿಕೆ ಸಹಿತ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು

Appeal to DC demanding vacation of encroachment of Valmiki Sangh’s premises