ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಹಣ್ಣುಗಳಲ್ಲೊಂದು ಬಾಳೆ ಹಣ್ಣು. ನಾವಿಂದು ಬಾಳೆಹಣ್ಣಿನಿಂದ ಮಾಡಬಹುದಾದ ಒಂದು ಸಿಂಪಲ್ ಹಾಗೂ ತುಂಬಾ ರುಚಿಯಾದ ಸಿಹಿ ರೆಸಿಪಿಯನ್ನು ಹೇಳಿಕೊಡುತ್ತೇವೆ. ಕರಾವಳಿ ಭಾಗದಲ್ಲಿ ಬಾಳೆ ಹಣ್ಣಿನ ರಸಾಯನವನ್ನು (Banana Rasayana) ಹೆಚ್ಚಾಗಿ ಮಾಡಲಾಗುತ್ತದೆ. ತುಂಬಾ ಸಿಂಪಲ್ ಆಗಿ ತಯಾರಿಸಬಹುದಾದ ಈ ಒಂದು ರೆಸಿಪಿಯನ್ನು ನೀವೂ ಮಾಡಿ ರುಚಿ ನೋಡಿ.

ಬೇಕಾಗುವ ಪದಾರ್ಥಗಳು:
ಮಾಗಿದ ಬಾಳೆಹಣ್ಣು – 8
ತುರಿದ ತೆಂಗಿನಕಾಯಿ – 2 ಕಪ್
ಸಕ್ಕರೆ – ಅರ್ಧ ಕಪ್
ಏಲಕ್ಕಿ – 2
ಉಪ್ಪು – ಚಿಟಿಕೆ

ಮಾಡುವ ವಿಧಾನ:
* ಮೊದಲಿಗೆ ಬಾಳೆಹಣ್ಣಿನ ಸಿಪ್ಪೆ ಸುಲಿದು, ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
* ಕತ್ತರಿಸಿದ ಬಾಳೆಹಣ್ಣನ್ನು ಒಂದು ಪಾತ್ರೆಗೆ ಹಾಕಿ, ಸಕ್ಕರೆ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬಳಿಕ 10 ನಿಮಿಷ ಪಕ್ಕಕ್ಕಿಡಿ.
* ಈ ನಡುವೆ ಮಿಕ್ಸರ್ ಜಾರ್‌ಗೆ ತೆಂಗಿನ ತುರಿ ಹಾಗೂ ಅರ್ಧಕಪ್ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ರುಬ್ಬಿದ ಬಳಿಕ ಸ್ಟ್ರೈನರ್ ಬಳಸಿ ಹಿಸುಕಿಕೊಂಡು ತೆಂಗಿನ ಹಾಲನ್ನು ತೆಗೆಯಿರಿ.
* ಈಗ ಬಾಳೆಹಣ್ಣಿನ ಮಿಶ್ರಣಕ್ಕೆ ತೆಂಗಿನ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಹಿಂಡಿದ ತೆಂಗಿನಕಾಯಿಯಲ್ಲಿ ಇನ್ನಷ್ಟು ಹಾಲಿನ ಅಂಶ ಇದ್ದರೆ, ಸ್ವಲ್ಪ ನೀರು ಸೇರಿಸಿ ಹಿಂಡಿಕೊಳ್ಳಿ. ರಸಾಯನದ ಸ್ಥಿರತೆ ನೋಡಿಕೊಂಡು ಮಿಶ್ರಣಕ್ಕೆ ಸೇರಿಸಿ.
* ಇದೀಗ ಸಿಹಿಯಾದ ಬಾಳೆಹಣ್ಣಿನ ರಾಸಾಯನ ತಯಾರಾಗಿದ್ದು, ಶ್ಯಾವಿಗೆಯೊಂದಿಗೆ ಬಡಿಸಿ. ನೀವಿದನ್ನು ನೇರವಾಗಿಯೂ ಸವಿಯಬಹುದು.

Bāḷehaṇṇina rasāyana