ಚಿಕ್ಕಮಗಳೂರು:  ಸರಕಾರದ ಸ್ವಾಯುತ್ತ ಸಂಸ್ಥೆಗಳ ಮೂಲಕ ಗುತ್ತಿಗೆದಾರರು, ಕಾರ್ಪೋರೇಟ್ ಉದ್ಯಮಿಗಳನ್ನು ಬೆದರಿಸಿ ಅವರಿಂದ ಕೋಟ್ಯಂತರ ರೂ. ಎಲೆಕ್ಟ್ರೋಲ್ ಬಾಂಡ್ ಪಡೆದಿರುವ ಬಿಜೆಪಿ ಭ್ರಷ್ಟಾಚಾರಿಗಳ ಜನತಾಪಾರ್ಟಿ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಟೀಕಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ನಂತರ ಚುನಾವಣಾ ಬಾಂಡ್ ಹಗರಣ ಬೆಳಕಿದೆ ಬಂದಿದೆ. ಸುಮಾರು ೮೨೫೨ ಕೋಟಿ ರೂ. ಎಸ್‌ಬಿಐ ಮೂಲಕ ಗುತ್ತಿಗೆದಾರರಿಂದ, ಭ್ರಷ್ಟ ಕಂಪನಿಗಳು, ಔಷಧ ತಯಾರಿಕಾ ಕಂಪನಿಗಳು, ಬೆಡ್ಡಿಂಗ್ ದಂಧೆ ನಡೆಸುವ ಕಂಪನಿಗಳಿಂದ ಎಲೆಕ್ಟ್ರಾಲ್ ಬಾಂಡ್ ಸಂದಾಯವಾಗಿರುವುದನ್ನು ನೋಡಿದರೆ ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದ ಭ್ರಷ್ಠಾಚಾರ ಇದಾಗಿದೆ ಎಂದು ಆರೋಪಿಸಿದರು.

೪೯ ಕಂಪನಿಗಳಿಗೆ ೬೨ ಸಾವಿರ ಕೋಟಿ ರೂ.ಗಳ ಪ್ರಾಜೆಕ್ಟ್ ನೀಡಿ ೬೦೦ ಕೋಟಿಯನ್ನು ಬಾಂಡ್ ಮೂಲಕ ವಸೂಲಿ ಮಾಡಿದ್ದಾರೆ. ೪೧ ಕಂಪನಿಗಳನ್ನು ಇಡಿ, ಸಿಬಿಐ ಮತ್ತು ಐಟಿ ಮೂಲಕ ರೈಡ್ ಮಾಡಿಸಿ ಬಿಜೆಪಿಗೆ ೧೮೫೩ ಕೋಟಿ ರೂ.ಸಂದಾಯವಾಗಿದೆ. ಕಳೆದ ೬ ವರ್ಷದಿಂದ ೩೮ ಕಾರ್ಪೋರೇಟ್ ಕಂಪನಿಗಳಿಗೆ ೪ ಲಕ್ಷ ಕೋಟಿ ರೂ. ಮೊತ್ತದ ೧೭೯ ಗುತ್ತಿಗೆ ಕೊಟ್ಟು ೨ ಸಾವಿರ ಕೋಟಿ ರೂ. ಬಾಂಡ್ ಮೂಲಕ ಕಿಕ್‌ಬ್ಯಾಕ್ ಪಡೆದಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.

ದೇಶಭ್ರಷ್ಟ ರಾಜಕಾರಣಿಗಳನ್ನು ಐಟಿ, ಇಡಿ ಮತ್ತು ಸಿಬಿಐ ಮೂಲಕ ಬೆದರಿಸಿ ಬಿಜೆಪಿಗೆ ಸೇರಿಸಿಕೊಳ್ಳುವುದನ್ನು ನೋಡಿದರೆ ಬಿಜೆಪಿಯನ್ನು ಭ್ರಷ್ಟಾಚಾರಿಗಳ ವಾಷಿಂಗ್‌ಮೆಷಿನ್ ಎಂಬುದು ಸಾಬೀತಾಗಿದೆ ಎಂದರು.

ನರೇಂದ್ರ ಮೋದಿಯವರ ಗ್ಯಾರಂಟಿ ಇಲ್ಲದ ಗ್ಯಾರಂಟಿಯನ್ನು ಈ ಬಾರಿ ಜನರು ತಿರಸ್ಕರಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವನ್ನು ಅಧಿಕಾರಕ್ಕೆ ತರುತ್ತಾರೆ. ಇಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಂದಲ್ಲಿ ರೈತರ ಸಾಲ ಮನ್ನಾ, ಯುವಕರಿಗೆ ೧ ಲಕ್ಷ ಅಪ್ರೆಂಟಿಸ್, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಕೃಷಿಯನ್ನು ಜಿಎಸ್‌ಟಿ ಮುಕ್ತ ಮಾಡುವುದು, ಪ್ರತಿ ಬಡ ಮಹಿಳೆಗೆ ವರ್ಷಕ್ಕೆ ೧ ಲಕ್ಷ ರೂ., ಕೇಂದ್ರ ಸರಕಾರಿ ನೌಕರಿಯಲ್ಲಿ ಶೇ.೫೦ ಮಹಿಳಾ ಮೀಸಲಾತಿ, ಆಶಾ ಅಂಗನವಾಡಿ ಮತ್ತು ಬಿಸಿಯೂಟದ ಕಾರ್ಯಕರ್ತೆಯರಿಗೆ ಡಬಲ್ ವೇತನ, ಪ್ರತಿ ಜಿಲ್ಲೆಗಳಲ್ಲಿ ಕೆಲಸ ಮಾಡುವ ಮಹಿಳೆಗೆ ವಸತಿ ನಿಲಯ ತೆರೆಯಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರೇಖಾಹುಲಿಯಪ್ಪಗೌಡ, ಡಾ.ಡಿ.ಎಲ್.ವಿಜಯ್‌ಕುಮಾರ್, ಹೆಚ್.ಪಿ ಮಂಜೇಗೌಡ, ಶಿವಾನಂದಸ್ವಾಮಿ, ಮಲ್ಲೇಶ್, ತನೂಜ್ ನಾಯ್ಡು, ಲಕ್ಷ್ಮಣ, ನಯಾಜ್ ಅಹ್ಮದ್, ರಸೂಲ್‌ಖಾನ್ ಇದ್ದರು.

BJP is a washing machine for the corrupt