ಬೆಂಗಳೂರು : ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ವಿಸ್ತರಣೆ ಸಂಕ್ರಾಂತಿ ಬಳಿಕ ಉತ್ತರಾಯಣದಲ್ಲಾದರೂ ಆಗುವುದೇ ಅಥವಾ ಇಲ್ಲವೇ ಎಂಬ ಕುತೂಹಲ ಆಡಳಿತಾರೂಢ ಬಿಜೆಪಿ ಪಾಳಯದಲ್ಲಿ ಮೂಡಿದೆ. ಸೋಮವಾರ ಮತ್ತು ಮಂಗಳವಾರ ದೆಹಲಿಯಲ್ಲಿ ಎರಡು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಆ ಸಭೆಯ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.

ಈ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಪಕ್ಷದ ರಾಜ್ಯ ಹಿರಿಯ ನಾಯಕರು ತೆರಳುತ್ತಿರುವುದರಿಂದ ಇದೇ ವೇಳೆ ವರಿಷ್ಠರೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆ ಸಿದ್ಧತೆ ಸಂಬಂಧಿಸಿದಂತೆ ಸಮಾಲೋಚನೆ ನಡೆಯಬಹುದಾಗಿದೆ. ಈ ವೇಳೆ ಚುನಾವಣೆಗೆ ಪೂರಕವಾಗಿ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿಯಲ್ಲಿ ಕಳೆದ ಡಿಸೆಂಬರ್‌ ತಿಂಗಳಲ್ಲಿ ನಡೆದ ವಿಧಾನಮಂಡಲದ ಅಧಿವೇಶನ ವೇಳೆ ಮಾಜಿ ಸಚಿವರಾದ ಕೆ.ಎಸ್‌.ಈಶ್ವರಪ್ಪ ಮತ್ತು ರಮೇಶ್‌ ಜಾರಕಿಹೊಳಿ ಅವರು ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನಗೊಂಡು ಅಧಿವೇಶನದಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದರು. ಈಶ್ವರಪ್ಪ ಅವರಂತೂ ಬಹಿರಂಗವಾಗಿಯೇ ಹೇಳಿಕೆಯನ್ನೂ ನೀಡಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರು ಉಭಯ ನಾಯಕರನ್ನೂ ಕರೆದು ಆದಷ್ಟುಶೀಘ್ರ ಸಂಪುಟ ವಿಸ್ತರಣೆ ಮಾಡುವ ಭರವಸೆ ನೀಡಿದ್ದರು. ಬಳಿಕ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಬಂದರೂ ಫಲ ನೀಡಲಿಲ್ಲ. ನಂತರ ಅಮಿತ್‌ ಶಾ ಅವರು ಬೆಂಗಳೂರಿಗೆ ಆಗಮಿಸಿದ ವೇಳೆಯೂ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪ ಮಾಡಿದ ನಾಯಕರಿಗೆ ‘ನೋಡೋಣ..’ ಎಂದಷ್ಟೇ ಪ್ರತಿಕ್ರಿಯಿಸಿ ತೆರಳಿದ್ದರು.

ಇದೀಗ ಸಂಕ್ರಾಂತಿ ಮುಗಿಯುತ್ತಿದ್ದಂತೆಯೇ ಮತ್ತೆ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದಲ್ಲಿ ಚರ್ಚೆ ಆರಂಭವಾಗಬಹುದು. ಇದೇ ಸಮಯದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿರುವುದರಿಂದ ಆ ಸಭೆಯ ಬಳಿಕ ವಿಸ್ತರಣೆ ಕುರಿತಂತೆ ಸ್ಪಷ್ಟನಿಲುವು ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Cabinet expansion after January 17?