ಚಾಮರಾಜನಗರ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶವನ್ನು ಹೊಂದಿದ್ದೇನೆ. ಈ ಕಾರಣಕ್ಕೆ ನನ್ನನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ವಿ.ಸೋಮಣ್ಣ ಮನವಿ ಮಾಡಿದರು. ತಾಲೂಕಿನ ತಾವರೆ ಕಟ್ಟೆಮೋಳೆ, ಬಂಡಿಗೆರೆ, ಹರದನಹಳ್ಳಿ , ಪುಣಜನೂರು ಹಾಗೂ ಇನ್ನಿತರೆ ಕಾಡಂಚಿನ ಗ್ರಾಮಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ ಸಚಿವ ವಿ.ಸೋಮಣ್ಣ ಅವರ ಜತೆಗೆ ಬಿಜೆಪಿ ಕಾರ್ಯಕರ್ತರು ಹಾಗೂ ಯುವಕರ ದಂಡೆ ನೆರೆದಿತ್ತು. ಪ್ರತಿಯೊಂದು ಗ್ರಾಮಗಳಲ್ಲೂ ಅದ್ಧೂರಿ ಸ್ವಾಗತ ಹಾಗೂ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಪ್ರತಿ ಗ್ರಾಮಗಳಲ್ಲೂ ನೂರಾರು ಸಂಖ್ಯೆಯಲ್ಲಿ ಸೇರುತ್ತಿದ್ದ ಬೆಂಬಲಿಗರು ಪಟಾಕಿ ಸಿಡಿಸಿ ಹಾರ ತುರಾಯಿ ಹಾಕಿ, ಮಹಿಳೆಯರು ಆರತಿ ಬೆಳಗಿ ವಿ.ಸೋಮಣ್ಣ ಅವರನ್ನು ಬರಮಾಡಿಕೊಂಡರು.

ತಾವರೆಕಟ್ಟೆಮೋಳೆ ಗ್ರಾಮದಿಂದ ಪ್ರಚಾರ ಪ್ರಾರಂಭಿಸಿದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ವಿ.ಸೋಮಣ್ಣ ಅವರನ್ನು ಗ್ರಾಮದ ಉಪ್ಪಾರ ಸಮುದಾಯದ ಮುಖಂಡರು ಹಾಗೂ ಯುವಕರು ಬೃಹತ್‌ ಸೇಬಿನ ಹಾರ ಹಾಕಿ, ಮಹಿಳೆಯರು ಆರತಿ ಎತ್ತಿ ಅದ್ಧೂರಿಯಾಗಿ ಬರಮಾಡಿಕೊಂಡರು. ಬಂಡಿಗೆರೆಯಲ್ಲಿ ಬಿಜೆಪಿಯ ಮುಖಂಡರು, ಕಾರ್ಯಕರ್ತರ ಜೊತೆಗೆ ಪ್ರಚಾರ ನಡೆಸಿ ಮಾತನಾಡಿದ ಸಚಿವ ವಿ.ಸೋಮಣ್ಣ ಚಾ.ನಗರ ಜಿಲ್ಲೆಯಾಗಿ ಕನಿಷ್ಠ ಅಭಿವೃದ್ಧಿ ಹೊಂದಿಲ್ಲ, ಮೂಲ ಸೌಕರ್ಯಗಳಿಂದ ಸಂಪೂರ್ಣ ವಂಚಿತವಾಗಿದೆ. ಸಾಕಷ್ಟುವರ್ಷಗಳ ನನ್ನ ರಾಜಕೀಯ ಅನುಭವವನ್ನು ಕ್ಷೇತ್ರದ ಅಭಿವೃದ್ಧಿಗೆ ಧಾರೆ ಎರೆಯುತ್ತೇನೆ ಎಂದು ಭರವಸೆ ನೀಡಿದರು.

ಗುಡಿಸಲು ಮುಕ್ತ ಜಿಲ್ಲೆಯಾಗಿಸುವೆ: ಕ್ಷೇತ್ರದ ಜನರು ಮೂರು ಬಾರಿ ಪುಟ್ಟರಂಗಶೆಟ್ಟಿಅವರನ್ನು ಶಾಸಕರಾಗಿ ಆಯ್ಕೆ ಮಾಡಿದ್ದೀರಿ. ನಾನು ಅವರ ಅಭಿವೃದ್ಧಿಯ ಕುರಿತು ಮಾತನಾಡಲು ಹೋಗುವುದಿಲ್ಲ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದಿದ್ದು, ನಮ್ಮ ನಾಯಕರಾದ ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಸುವರ್ಣ ಗ್ರಾಮ ಯೋಜನೆಯಲ್ಲಿ ಜಿಲ್ಲೆಗೆ ಸಾಕಷ್ಟುಮನೆಗಳನ್ನು ನಿರ್ಮಾಣ ಮಾಡಿದ್ದು, ಮತ್ತೊಮ್ಮೆ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಲ್ಲೆಯನ್ನು ಗುಡಿಸಲು ಮುಕ್ತ ಗ್ರಾಮವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ನಾನು ಜಾತಿ ರಾಜಕಾರಣ ಮಾಡಲು, ಸಮುದಾಯ ಒಡೆಯುವ ಕಾರಣಕ್ಕೆ ಇಲ್ಲಿಗೆ ಬಂದಿಲ್ಲ. ನನ್ನ ಅಭಿವೃದ್ಧಿ ಪರ ಕೆಲಸ ಮುಂದಿಟ್ಟುಕೊಂಡು, ಈ ಭಾಗದ ಜನರ ಸೇವೆ ಮಾಡುವ ಮಹದಾಸೆಯಿಂದ ಬಂದಿದ್ದೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರು 15 ವರ್ಷದಲ್ಲಿ ಮಾಡಿರುವ ಅಭಿವೃದ್ಧಿಯನ್ನು ಕೇವಲ 5 ವರ್ಷಗಳಲ್ಲಿ ಮಾಡಿ ತೋರಿಸುತ್ತೇನೆ. ಜಿಲ್ಲೆಯಾಗಿ 25 ವರ್ಷಗಳು ತುಂಬಿದ್ದರೂ ಕ್ಷೇತ್ರ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ಪುಟ್ಟರಂಗಶೆಟ್ಟಿಅವರಿಗೆ ಮೂರು ಬಾರಿ ಅವಕಾಶ ಕಲ್ಪಿಸಿಕೊಟ್ಟಿದ್ದೀರಿ ನನಗೊಂದು ಬಾರಿ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ವಾಲ್ಮೀಕಿ ನಾಯಕ ಸಮುದಾಯದ ಹಿತ ಕಾಪಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಬದ್ಧವಾಗಿದೆ. ಪ.ಪಂ.ಮೀಸಲಾತಿ ಹೆಚ್ಚಳ, ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪನೆ, ವಿದ್ಯಾರ್ಥಿ ವೇತನ ಹೆಚ್ಚಳ, ಇತರ ಯೋಜನೆ ಜಾರಿಗೆ ತರುವಲ್ಲಿ ಬಿಜೆಪಿ ಸರ್ಕಾರ ವಾಲ್ಮೀಕಿ ನಾಯಕ ಸಮುದಾಯದ ಬೆಂಬಲಕ್ಕೆ ನಿಂತಿದ್ದು. ಉಪುತ್ರ್ಪ ತಿಂದ ಋುಣ ತೀರಿಸಲು ಸಮುದಾಯದ ಮತದಾರರು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ನಿಮ್ಮ ಮತ ನೀಡಬೇಕು ಎಂದು ಮನವಿ ಮಾಡಿದರು.

ಪ್ರಚಾರದಲ್ಲಿ ವಿಧಾನಪರಿಷತ್‌ ಮಾಜಿ ಸದಸ್ಯ ಪ್ರೊ.ಮಲ್ಲಿಕಾರ್ಜುನಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್‌, ಮುಖಂಡ ಹನುಮಂತ ಶೆಟ್ಟಿ, ಮಂಗಲ ಶಿವಕುಮಾರ್‌, ತಾವರೆಕಟ್ಟೆಮೋಳೆ ಮಹೇಶ್‌, ಅಂಕನಶೆಟ್ಟಿಪುರ ಸೋಮಣ್ಣ, ಶಮಿತ್‌ ಕುಮಾರ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಬಸವಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಬಸವಣ್ಣ, ಚನ್ನಂಜಪ್ಪ, ಹರದನಹಳ್ಳಿ ಪಾಂಡು, ಪುಣಜನೂರು ಗಿರೀಶ್‌, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರು, ಮೂಡಳ್ಳಿ ಮೂರ್ತಿ, ಹರದನಹಳ್ಳಿ ಸುಂದ್ರಪ್ಪ ಹಾಗೂ ಚಿತ್ರನಟ ಶಂಕರಬಾಬು, ಓಬಿಸಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್‌ಶೆಟ್ಟಿ, ತಾಲೂಕು ಉಪ್ಪಾರ ಸಂಘದ ಉಪಾಧ್ಯಕ್ಷ ಆರ್‌.ಮಹದೇವಶೆಟ್ಟಿ, ಕಾರ್ಯದರ್ಶಿ ಮಂಜುಳ, ರವಿ, ಬಂಗಾರಶೆಟ್ಟಿ, ಗಣೇಶ್‌, ಕುಮಾರ್‌, ಶಿವನಂಜಶೆಟ್ಟಿ, ನಾಗೇಂದ್ರ, ಗೋವಿಂದ, ಕೃಷ್ಣಶೆಟ್ಟಿ, ತಾಂಡವಮೂರ್ತಿ, ಜಯಗಣೇಶ್‌, ಸಿದ್ದಪ್ಪಾಜಿ, ಸಿದ್ದರಾಜು, ಮಹೇಶ್‌, ಗಿರೀಶ್‌, ಮಹದೇವಸ್ವಾಮಿ ತಬಲ ಶಿವಸ್ವಾಮಿ, ನಾಗರಾಜು ಭಾಗವಹಿಸಿದ್ದರು.

ತಮಿಳರಿಂದ ಬೆಂಬಲದ ಭರವಸೆ: ಸಚಿವ ವಿ.ಸೋಮಣ್ಣ ಅವರು ಮತಯಾಚನೆ ವೇಳೆ ಸೋಮವಾರಪೇಟೆ ಬಳಿಯಿರುವ ತಮಿಳು ಸಂಘದ ಸಮುದಾಯ ಭವನಕ್ಕೆ ಭೇಟಿ ನೀಡಿ ತಮಿಳು ಸಮುದಾಯದವರಲ್ಲಿ ಬೆಂಬಲ ಕೋರಿದರು. ತಮಿಳು ಸಂಘದ ಅಧ್ಯಕ್ಷ ಜಗದೀಶ್‌ ಮಾತನಾಡಿ, ಚಾಮರಾಜನಗರ ಅಭಿವೃದ್ಧಿ ನಿಟ್ಟಿನಲ್ಲಿ ಈ ಬಾರಿ ವಿ. ಸೋಮಣ್ಣ ಅವರನ್ನು ಬೆಂಬಲಿಸುವುದಾಗಿ ಅವರು ಭರವಸೆ ನೀಡಿದರು. ಸೋಮಣ್ಣ ಮಾತನಾಡಿ, ತಮಿಳು ಸಮುದಾಯದವರ ಸ್ವಾಭಿಮಾನ, ಪ್ರೀತಿ ವಿಶ್ವಾಸ, ನಂಬಿಕೆ ನಾಡಿಗೆ ಮಾದರಿಯಾದದ್ದು, ಅವರು ಶ್ರಮ ಜೀವಿಗಳು ಅವರ ದುಡಿಮೆ ನೋಡಿದರೆ ಖುಷಿಯಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಸ್ಲಿಂ ಮುಖಂಡರಿಂದಲೂ ಸ್ವಾಗತ: ಸಚಿವ ವಿ. ಸೋಮಣ್ಣ ಅವರು ಮತಯಾಚನೆ ಮಾಡುವಲ್ಲಿ ಹರದನಹಳ್ಳಿ ಗ್ರಾಮದ ಜಾಮಿಯಾ ಮಸೀದಿ ಕಾರ್ಯದರ್ಶಿ ಮನ್ಸೂರ್‌ ಅಹಮ್ಮದ್‌, ಸೋಮಣ್ಣ ಅವರನ್ನು ಸ್ವಾಗತಿಸಿದರು. ಈ ವೇಳೆ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಉರ್ದು ಭಾಷೆಯಲ್ಲೇ ಮಾತನಾಡಿದ ವಿ.ಸೋಮಣ್ಣ ಸಮುದಾಯದ ಸಮಗ್ರ ಅಭಿವೃದ್ಧಿಗೆ ನನ್ನನ್ನು ಈ ಬಾರಿ ಬೆಂಬಲಿಸಿ ಎಂದು ಮನವಿ ಮಾಡಿದರು. ಈ ವೇಳೆ ಜಾಮೀಯ ಮಸೀದಿ $ಅಧ್ಯಕ್ಷ ಅಯೂಬ್‌ ಪಾಷಾ, ಅಹಮ್ಮದ್‌ ಹುಸೇನ್‌, ಬಾಷಾ, ಮಜೂರ್‌ ಸಾಬ್‌ ಹಾಗೂ ಇತರರು ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Chamarajanagar is a slum free district