ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಜನ ವಿರೋಧಿ ಬಜೆಟ್ ಆಗಿದ್ದು, ಇದು ರಿವರ್ಸ್ ಗೇರ್ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದ್ದಾರೆ.

ಬಜೆಟ್ ಬಳಿಕ ವಿಧಾನಸೌಧದಲ್ಲಿ‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, ‘ಚುನಾವಣೆ ನಂತರ ಸಿಎಂ ಸಿದ್ದರಾಮಯ್ಯ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿದ್ದಾರೆ. ಇವತ್ತಿನ ಹಣಕಾಸಿನ ಸ್ಥಿತಿ, ಇವತ್ತಿನ ವಾಸ್ತವ ಸ್ಥಿತಿ ಬಗ್ಗೆ ಮಾತನಾಡುವ ಬದಲು ಹಳೆಯ ಕಾರ್ಯಕ್ರಮಗಳ ಬಗ್ಗೆ ಹೇಳುತ್ತಾರೆ ಎಂದರೆ, ಅವರು ಭೂತಕಾಲದಲ್ಲಿದ್ದಾರೆ. ಇದು ರಾಜಕೀಯ ಬಜೆಟ್ ಎಂದು ವಾಗ್ದಾಳಿ ನಡೆಸಿದರು.

ಹಲವಾರು ಅಂಕಿ ಅಂಶಗಳನ್ನು ಆ ಸಂದರ್ಭಕ್ಕೆ ವಾಸ್ತವಾಂಶಕ್ಕೆ ತಕ್ಕಂತೆ ಎಲ್ಲ ಸರ್ಕಾರಗಳು ಮಾಡಿವೆ. ಪ್ರತಿಯೊಂದಕ್ಕೂ 2013 ಕ್ಕೆ ಹೋಲಿಕೆ ಮಾಡಿದ್ದಾರೆ. ಅದನ್ನು ನೋಡಿದರೆ ಅವರು ಹೆಚ್ಚು ಸಾಲ ಮಾಡಿದ್ದಾರೆ. ಇದೊಂದು ರಿವರ್ಸ್ ಗೇರ್ ಇರುವ ಸರ್ಕಾರ ಆಗಿದೆ ಎಂದು ಟೀಕಿಸಿದರು.

ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ಬೇಕು ಎಂದಿದ್ದಾರೆ. ಆದರೆ ಕೆಲವು ಗ್ಯಾರಂಟಿಗಳಉ ‌ಇನ್ನೂ‌ ಜಾರಿಯಾಗಿಲ್ಲ. ಆದರೆ ಈ ವರ್ಷಕ್ಕೆ ಕೇವಲ 20 ರಿಂದ 22 ಸಾವಿರ ಕೋಟಿ ರೂ ಸಾಕು. ಈ ನಿಟ್ಟಿನಲ್ಲಿ ಹೆಚ್ಚಿನ ತೆರಿಗೆ ಹಾಗೂ ಸಾಲ ಪಡೆದುಕೊಳ್ಳುವ ಅಗತ್ಯ ಇರಲಿಲ್ಲ ಎಂದರು.