ಅಯೋಧ್ಯೆ: ಬರೊಬ್ಬರಿ 5 ಶತಮಾನಗಳ ಹೋರಾಟ ಮತ್ತು ದಶಕಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದ್ದು, ಅಯೋಧ್ಯೆ ರಾಮಮಂದಿರ ಕೊನೆಗೂ ಉದ್ಘಾಟನೆಯಾಗಿ, ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಲಾಗಿದೆ.

ಸುಮಾರು 496 ವರ್ಷಗಳಿಂದ ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ (Ram Mandir) ಕನಸು ನನಸಾಗಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠಾಪನೆ ) ನೆರವೇರಿಸಲಾಗಿದೆ. ಇದರೊಂದಿಗೆ ರಾಮಮಂದಿರವು ಉದ್ಘಾಟನೆಯಾದಂತಾಗಿದೆ.

ವಿಶೇಷ ಹೆಲಿಕಾಪ್ಟರ್‌ನಲ್ಲಿ ರಾಮಮಂದಿರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬೆಳ್ಳಿಯ ಛತ್ರಿವನ್ನು ಹಿಡಿದುಕೊಂಡು ರಾಮಮಂದಿರ ಪ್ರವೇಶಿಸಿದರು. ಇದಾದ ಬಳಿಕ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಅವರು, ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕೈಂಕರ್ಯ ನೆರವೇರಿಸಿದರು.

ಪ್ರಧಾನಿ ನರೇಂದ್ರ ಮೋದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹಾಗೂ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್‌ದಾಸ್‌ ಅವರು ಸಾಥ್ ನೀಡಿ ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠೆ ನೆರವೇರಿಸಿದರು.

ಇದರೊಂದಿಗೆ 2019ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಐತಿಹಾಸಿಕ ತೀರ್ಪಿನಂತೆ ರಾಮಮಂದಿರವನ್ನು ನಿರ್ಮಿಸಿ, ಲೋಕಾರ್ಪಣೆ ಮಾಡಿದಂತಾಗಿದೆ. ಸಾವಿರಾರು ಜನರ ಹೋರಾಟ, ಪ್ರಾಣ ತ್ಯಾಗ ಹಾಗೂ ಸುದೀರ್ಘ ಕಾನೂನು ಹೋರಾಟದ ಬಳಿಕ ರಾಮಮಂದಿರದ ಕನಸು ಸಾಕಾರಗೊಂಡಿದೆ. ಈಗ ರಾಮಮಂದಿರ ನಿರ್ಮಾಣದ ಕನಸು ನನಸಾಗಿದ್ದು, ಮುಂದಿನ ದಿನಗಳಲ್ಲಿ ರಾಮರಾಜ್ಯದ ಕನಸು ಕೂಡ ನನಸಾಗಲಿದ ಎಂಬುದು ದೇಶದ ಜನರ ಆಶಯವಾಗಿದೆ.

ಬಾಲಿವುಡ್‌ ನಟರಾಜ್‌ ಅಮಿತಾಭ್‌ ಬಚ್ಚನ್‌, ರಣಬೀರ್‌ ಕಪೂರ್‌, ಆಲಿಯಾ ಭಟ್‌, ಆಯುಷ್ಮಾನ್‌ ಖುರಾನ, ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌, ಮುಕೇಶ್‌ ಅಂಬಾನಿ ಕುಟುಂಬಸ್ಥರು, ಗಾಯಕರಾದ ಸೋನು ನಿಗಮ್‌, ತೆಲುಗು ನಟ ಚಿರಂಜೀವಿ, ಅವರ ಪುತ್ರ ರಾಮ್ ಚರಣ್ ತೇಜ್ ಸೇರಿ ಸುಮಾರು 7 ಸಾವಿರಕ್ಕೂ ಅಧಿಕ ಗಣ್ಯರು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಸಾಕ್ಷಿಯಾದರು.

Consecration to Ramlalla idol