ವಿಧಾನಸಭೆ: ‘ಉಪ ಮುಖ್ಯಮಂತ್ರಿ ಆಗಿದ್ದರೂ ಈಗಲೂ ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರೆಯುತ್ತಿದ್ದೇನೆ. ನನ್ನ ನಂತರ ಅಧ್ಯಕ್ಷ ಸ್ಥಾನದಲ್ಲಿ ಧ್ರುವ ನಾರಾಯಣ ಅವರನ್ನು ಕೂರಿಸಬೇಕು ಎಂಬ ನಿರ್ಧಾರ ಮಾಡಿದ್ದೆ. ಅವರು ಬದುಕಿದ್ದರೆ ಈ ಸರ್ಕಾರದಲ್ಲಿ ಸಚಿವ ಸಂಪುಟ ಸದಸ್ಯರಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಧ್ರುವನಾರಾಯಣ ಅವರನ್ನು ನೆನೆದು ಡಿ.ಕೆ. ಶಿವಕುಮಾರ್‌ ಅವರು ಕಣ್ಣೀರಾದರು. ಅಧಿವೇಶನದಲ್ಲಿ ಗಣ್ಯರಿಗೆ ಸಂತಾಪ ಸೂಚಿಸುವ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಮಾಜಿ ಸಂಸದ ಧ್ರುವನಾರಾಯಣ ಅವರ ಜತೆಗಿನ ಒಡನಾಟ ಹಾಗೂ ಅವರ ಕೆಲಸದ ವೈಖರಿಯನ್ನು ನೆನೆದು ಗದ್ಗದಿತರಾಗಿ ಕಣ್ಣೀರಾಕಿದರು.

ನನ್ನ ಜತೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ ಈಶ್ವರ್‌ ಖಂಡ್ರೆ, ಸತೀಶ್‌ ಜಾರಕಿಹೊಳಿ, ರಾಮಲಿಂಗಾರೆಡ್ಡಿ ಅವರೆಲ್ಲರೂ ಸಚಿವ ಸಂಪುಟ ಸದಸ್ಯರಾಗಿ ಇದೇ ಸಾಲಿನಲ್ಲಿ ಕೂತಿದ್ದಾರೆ. ಧ್ರುವನಾರಾಯಣ ಬದುಕಿದ್ದರೆ ಖಂಡಿತ ಈ ಸದನದ ಸದಸ್ಯರಾಗಿ ಸಚಿವ ಸ್ಥಾನದಲ್ಲಿ ಕೂರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿರಲಿಲ್ಲ ಎಂದರು. ಸಹೋದರನಂತಿದ್ದ ಅವರ ಅಗಲಿಕೆ ನನ್ನ ಮನಸ್ಸಿಗೆ ಬಹಳ ನೋವು ತಂದಿದೆ. ನನಗೆ ರಾಜಕಾರಣದಲ್ಲಿ ಡಿ.ಕೆ.ಸುರೇಶ್‌ನಂತೆ, ಧ್ರುವನಾರಾಯಣ ಸಹ ಸಹೋದರನಂತಿದ್ದ. ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಗಳ ಉಸ್ತುವಾರಿ ವಹಿಸಿದ್ದೆ.

ಅವರ ಕಾರ್ಯದ ಫಲವಾಗಿ ಈ ಭಾಗದ ಶೇ.75 ರಷ್ಟು ಸದಸ್ಯರು ಈ ಸದನಕ್ಕೆ ಆಯ್ಕೆಯಾಗಿ ಬಂದಿದ್ದಾರೆ. ಚಾಮರಾಜನಗರದಲ್ಲಿ ಆಕ್ಸಿಜನ್‌ ದುರಂತದಲ್ಲಿ 36 ಜನ ಮೃತರಾದಾಗ ಆಗಿನ ಆರೋಗ್ಯ ಮಂತ್ರಿಗಳು ಕೇವಲ 3 ಮಂದಿ ಮಾತ್ರ ಸತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಧ್ರುವನಾರಾಯಣ ಅವರು ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಹೋಗಿ ಪರಿಶೀಲಿಸುವಂತೆ ಮಾಡಿದಾಗ 36 ಮಂದಿ ಸಾವನ್ನಪ್ಪಿರುವುದು ಬಯಲಾಯಿತು. ಅವರು ರಾಜಕೀಯ ಕ್ಷೇತ್ರದ ಧ್ರುವತಾರೆ ಎಂದು ಹೊಗಳಿದರು.

ಗೆದ್ದು ಶಾಸಕರಾಗಬೇಕಿತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಧ್ರುವನಾರಾಯಣ ನನ್ನ ಜಿಲ್ಲೆಯವರು. ಎರಡು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಕೆಲಸ ಮಾಡಿದವರು. ಉತ್ತಮ ಶಾಸಕ ಎಂದು ಕ್ಷೇತ್ರದ ಜನತೆಯಿಂದ ಕರೆಸಿಕೊಂಡ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಈಗ ಬದುಕಿದ್ದರೆ ನಂಜನಗೂಡು ಕ್ಷೇತ್ರದಿಂದ ಗೆದ್ದು ಶಾಸಕರಾಗಬೇಕಾಗಿತ್ತು. ಅವರ ಮಗ ದರ್ಶನ್‌ ಬಹಳ ದೊಡ್ಡ ಅಂತದಲ್ಲಿ ಗೆದ್ದಿದ್ದಾರೆ. ಇದು ಕಾಂಗ್ರೆಸ್‌ ಪಕ್ಷ ಹಾಗೂ ರಾಜ್ಯ ರಾಜಕಾರಣಕ್ಕೆ ಬಹಳ ದೊಡ್ಡ ನಷ್ಟ. ಈ ನಷ್ಟಭರಿಸುವ ಶಕ್ತಿ ಎಲ್ಲರಿಗೂ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.

D.K.Sivakumar tears in the House on the parting of Dhruvanarayan