ಕೊಲಂಬೊ: ಅತ್ಯಾಚಾರ ಆರೋಪ ಕೇಳಿಬಂದಿರುವ ಶ್ರೀಲಂಕಾ ಕ್ರಿಕೆಟಿಗ (Sri Lankan Cricketer) ದನುಷ್ಕ ಗುಣತಿಲಕ (Danushka Gunathilaka) ಅವರನ್ನ ಎಲ್ಲ ಮಾದರಿಯ ಕ್ರಿಕೆಟ್‌ನಿಂದಲೂ ಅಮಾನತುಗೊಳಿಸಲು ಶ್ರೀಲಂಕಾ ಕ್ರಿಕೆಟ್ (Sri Lanka Cricket) ಮಂಡಳಿಯ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.

ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಡ್ನಿ ಪೊಲೀಸರು (Sydney Police) ಬಂಧಿಸಿದ ಒಂದು ದಿನದ ನಂತರ ಲಂಕಾ ಕ್ರಿಕೆಟ್ ಮಂಡಳಿ ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದೆ.

ಸದ್ಯಕ್ಕೆ ಅವರನ್ನು ಅಮಾನತು ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಮುಕ್ತಾಯದ ನಂತರ ಅವರು ತಪ್ಪಿತಸ್ಥರೆಂದು ಕಂಡುಬಂದಲ್ಲಿ, ದನುಷ್ಕಗೆ ದಂಡ ವಿಧಿಸುವ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಆಸ್ಟ್ರೇಲಿಯಾದ (Australia) ಕಾನೂನು ಅಧಿಕಾರಿಗಳಿಗೆ ಅಗತ್ಯ ಬೆಂಬಲ ನೀಡುತ್ತದೆ ಎಂದು ಲಂಕಾ ಕ್ರಿಕೆಟ್ ಮಂಡಳಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಟಿ20 ವಿಶ್ವಕಪ್‌ನ (T20 WorldCup) ಶ್ರೀಲಂಕಾದ ತಂಡದಲ್ಲಿದ್ದ ಕ್ರಿಕೆಟಿಗ ದನುಷ್ಕಾ ಗುಣತಿಲಕ (31) ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿದೆ. ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ (Aating App) ಹಲವು ದಿನಗಳ ಹಿಂದೆ ಮಹಿಳೆಯ ಪರಿಚಯವಾಗಿದ್ದು, ನವೆಂಬರ್ 2 ರಂದು ಅವರಿಬ್ಬರು ಭೇಟಿಯಾದ ವೇಳೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುಣತಿಲಕ ಅವರನ್ನು ಬಂಧಿಸಿ ಸಿಡ್ನಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

2015 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಗುಣತಿಲಕ, ಪ್ರಸ್ತುತ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಟೂರ್ನಿಯಲ್ಲಿ ಇಂಗ್ಲೆಂಡ್ ಎದುರು ಕೊನೆ ಪಂದ್ಯವಾಡಿ ಸೋತು ಲಂಕಾ ತಂಡ ತವರಿಗೆ ಮರಳಿದೆ.

Danushka suspended from cricket