ಚಿಕ್ಕಮಗಳೂರು: ವಿಚಾರಣಾಧೀನ ಕೈದಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ದಾಯಾದಿಗಳ ಹೊಡೆದಾಟ ಪ್ರಕರಣದಲ್ಲಿ 7 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬಿದ್ದ ಮೂರೇ ದಿನಗಳಲ್ಲಿ ಸಾವನ್ನಪ್ಪಿದ್ದು, ಕಾರಾಗೃಹ ಹಾಗೂ ಪೊಲೀಸ್‌ ಇಲಾಖೆ ವಿರುದ್ಧ ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಣ್ಣ ತಮ್ಮ ಇಬ್ಬರು ಹಣಕಾಸಿನ ವಿಚಾರಕ್ಕೆ ಜಗಳವಾಡಿಕೊಂಡು ದಾಖಲಾಗಿದ್ದ 307 ಕೇಸ್ ನ ವಿಚಾರಣಾಧೀನ ಕೈದಿಯೊಬ್ಬ ಪರಾರಿಯಾಗಿ 7 ವರ್ಷಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಪಾಲಾದ ಮೂರೇ ದಿನಗಳಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಸತೀಶ್‌ ಎಂಬಾತ ಕಳೆದ 7 ವರ್ಷಗಳ ಹಿಂದೆ ತನ್ನ ಅಣ್ಣನಾದ ಸಿದ್ದರಾಜು ಎಂಬಾತನ ಹೋಟೆಲ್ ನಲ್ಲಿ ಕೆಲಸ ಮಾಡುವ ವೇಳೆ ಚಿಕ್ಕಮಗಳೂರಿನ ದಂಟರಮಕ್ಕಿ ಬಳಿ ಹೊಡೆದಾಟ ಮಾಡಿಕೊಂಡಿದ್ದಾರೆ.

ನಂತರ ತಲೆ ಮರೆಸಿಕೊಂಡು ಹಾಸನದ ಶ್ರೀನಗರದಲ್ಲಿ ವಾಸವಿದ್ದ ಕಳೆದ ನಾಲ್ಕು ದಿನಗಳ ಹಿಂದೆ ನಗರ ಠಾಣೆ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ತೀವ್ರ ಆರೋಗ್ಯ ಸಮಸ್ಯೆಯಿಂದಾಗಿ ಇಂದು ಬೆಳಿಗ್ಗೆ ಜಿಲ್ಲಾಸ್ಪತ್ರೆಯಲ್ಲಿ ಸತೀಶ್‌ ಮೃತಪಟ್ಟಿದ್ದಾನೆ. ಆದರೆ ಸತೀಶ್ ಸಾವಿನ ಬಗ್ಗೆ ಆತನ ಪತ್ನಿ ನೇತ್ರಾ ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಚಾರಣಾಧೀನ ಹಂತದಲ್ಲಿ ಮೃತಪಟ್ಟ ಕಾರಣ ನ್ಯಾಯಾಧೀಶರು ಜಿಲ್ಲಾಸ್ಪತ್ರೆಗೆ ಆಗಮಿಸಿ ಮೃತನ ಕುಟುಂಬಸ್ಥರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

Death of an under-trial prisoner in the district hospital