ಚಿಕ್ಕಮಗಳೂರು: ಮಂಡ್ಯ ಜಿಲ್ಲೆಯ ಕೆರೆಗೋಡಿನಲ್ಲಿ ಜಿಲ್ಲಾಧಿಕಾರಿ ಕಛೇರಿವರೆಗೆ ಮೆರವಣಿಗೆ ಸಂದರ್ಭದಲ್ಲಿ ಮಾರ್ಗಮಧ್ಯೆ ಇರುವ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿ ನಿಲಯ ಕಲ್ಲು ಹೊಡೆದು ಹಾನಿ ಮಾಡಿರುವ ಸಂಘ ಪರಿವಾರದ ಆರೋಪಿಗಳನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಪ್ರದೇಶ ಕುರುಬರ ಸಂಘದ ಸಹಕಾರ್ಯದರ್ಶಿ ಡಿ.ಸಿ ಪುಟ್ಟೇಗೌಡ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಇದೇ ಸಂದಂರ್ಭದಲ್ಲಿ ಕನಕದಾಸರ, ಸಂಗೊಳ್ಳಿರಾಯಣ್ಣನವರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರವನ್ನು ಹರಿದುಹಾಕಿ ಹಿಂದುಳಿದ ವರ್ಗಗಳ ನಾಯಕರಿಗೆ ಶ್ರೀರಾಮಸೇನೆ, ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕತರು ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಕೆರೆಗೋಡು ಗ್ರಾಮದ ಗೌರಿ ಶಂಕರ ಸೇವಾ ಟ್ರಸ್ಟ್‌ನವರು ಕೆರೆಗೋಡು ರಂಗಮಂದಿರದ ಆವರಣದಲ್ಲಿ ಧ್ವಜಸ್ಥಂಭ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದ ಮೇರೆಗೆ ಅಲ್ಲಿನ ಜಿಲ್ಲಾಡಳಿತವು ಸದರಿ ಧ್ವಜ ಸ್ಥಂಭವನ್ನು ಕರ್ನಾಟಕದ ನಾಡ ಧ್ವಜ ಮತ್ತು ತ್ರಿವರ್ಣ ಧ್ವಜ ಹಾರಿಸುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡುತ್ತೇವೆ ಎಂದು ಗ್ರಾಮ ಪಂಚಾಯಿತಿಯವರು ಅನುಮತಿ ನೀಡಿದ ಪತ್ರದಂತೆ ಅವರ ಮನವಿಯ ಮೇರೆಗೆ ಧ್ವಜ ಸ್ಥಂಬ ನಿರ್ಮಾಣಕ್ಕೆ ಮಂಡ್ಯ ಜಿಲ್ಲಾ ಆಡಳಿತ ಅವಕಾಶ ನೀಡಿದೆ ಎಂದರು.

ಆನಂತರದಲ್ಲಿ ಅಲ್ಲಿನ ಸ್ಥಳೀಯರು ರಾಷ್ಟ್ರ ಧ್ವಜವನ್ನು ಕೆಳಗಿಳಿಸಿ ಆ ಜಾಗದಲ್ಲಿ ಹನುಮ ಧ್ವಜವನ್ನು ಹಾರಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಧ್ವಜ ಇಳಿಸುವಂತೆ ಜನರಿಗೆ ತಿಳಿ ಹೇಳಿದ್ದು ಆದರೆ ಸ್ಥಳೀಯ ಪೋಲೀಸರು ಹಾಗೂ ಜಿಲ್ಲಾಡಳಿತದ ಮನವಿಯನ್ನು ತಿರಸ್ಕರಿಸಿ ಪ್ರತಿಭಟನೆ ಸಂಘರ್ಷಕ್ಕೆ ಇಳಿಯುವ ಮೂಲಕ ಉದ್ವಿಘ್ನ ಪರಿಸ್ಥಿತಿ ನಿರ್ಮಾಣ ಮಾಡುವಂತೆ ಮಾಡಿದ್ದಾರೆ ಎಂದು ದೂರಿದರು.

ಈ ಘಟನೆಯನ್ನು ಬಿ.ಜೆ.ಪಿ ಹಾಗೂ ಸಂಘ ಪರಿವಾರದವರು ಓಟಿನ ಓಲೈಕೆಗಾಗಿ ಅಲ್ಲಿನ ಜನರನ್ನು ಎತ್ತಿಕಟ್ಟಿ, ಪ್ರಚೋದಿಸಿ ಅಶಾಂತಿ ಉಂಟು ಮಾಡಿರುತ್ತಾರೆ. ಈ ಸಂಬಂಧ ವಿದ್ಯಾರ್ಥಿನಿಲಯದ ಒಳಗೆ ನುಗ್ಗಿ ದಾಂದಲೆ ನಡೆಸಿದ್ದು ಅಲ್ಲದೆ ಮಂಡ್ಯ ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಸಾತನೂರು ಮಹೇಶ್ ರವರ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ದಾಂದಲೆ ನಡೆಸಿ ಹಾನಿ ಮಾಡಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯನವರ ವಿರುದ್ದ ಸಂಘ ಪರಿವಾರದವರು ಸೇಡು ತೀರಿಸಿಕೊಳ್ಳಲು ಮಾಡಿರುವ ಕೆಲಸವೇ ಹೊರತು ಯಾವುದೇ ಹನುಮ ಧ್ವಜವಾಗಲೀ ಅಥವಾ ಧರ್ಮ ಉಳಿಸುವ ಹೋರಾಟವಾಗಲಿ ಇರುವುದಿಲ್ಲ. ಅಲ್ಲಿಯೇ ಇದ್ದ ಚಿಕ್ಕಮಗಳೂರು ಕ್ಷೇತ್ರದ ಮಾಜಿ ಶಾಸಕ ಸಿ.ಟಿ ರವಿ ಇದಕ್ಕೆ ಯಾವುದೇ ಪ್ರತಿರೋಧ ಒಡ್ಡದೆ ಪ್ರಚೋದನೆ ನೀಡಿದ್ದಾರೆ ಸಿ.ಟಿ ರವಿಯವರೇ ಹಾಗಾದರೆ ಕುರುಬ ಸಂಘದ ವಿದ್ಯಾರ್ಥಿ ನಿಲಯದಲ್ಲಿರುವ ೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಂದುಗಳಲ್ಲವೆ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಶೋಷಿತ ವರ್ಗಗಳ ಸಮಾವೇಶದಲ್ಲಿ ಕಾಂತರಾಜು ವರದಿಯನ್ನು ಬಿಡುಗಡೆ ಮಾಡಬೇಕೆಂಬ ಒತ್ತಡದ ಹಿನ್ನಲೆಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿ ಧರ್ಮ ರಾಜಕಾರಣವನ್ನು ಮುಂದು ಮಾಡಿ ಹಿಂಸೆಗಿಳಿದು ಕಾಂತರಾಜು ವರದಿಯನ್ನು ಬಿಡುಗಡೆ ಮಾಡದಂತೆ ಮಾಡುವ ಹಾಗೂ ದಿಕ್ಕುತಪ್ಪಿಸುವ ಕೆಲಸವಾಗಿದೆ ಎಂದು ಲೇವಡಿ ಮಾಡಿದರು.

ಈ ರೀತಿ ಸಂಘ ಪರಿವಾರದ ಕೆಲವರು ಕಲ್ಲು ತೂರಾಟ ಮಾಡಿರುವುದು ಯಾರ ಮೇಲೆ? ರಾಮ-ಹನುಮ ಹೆಸರು ಹೇಳಿಕೊಂಡು ಓಟಿಗಾಗಿ ಓಲೈಕೆ ಮಾಡಿಕೊಂಡು ಈ ರೀತಿಯ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡುತ್ತಿದ್ದು ದೇಶದ ಸಂವಿಧಾನ, ರಾಷ್ಟ್ರ ಧ್ವಜಕ್ಕೆ ಕನಿಷ್ಠ ಗೌರವವನ್ನೂ ನೀಡದ ಬಿ.ಜೆ.ಪಿ.ಯ ನಡೆ ನಿಜಕ್ಕೂ ದೇಶ ದ್ರೋಹದ ಕೆಲಸ ಎಂದು ಆರೋಪಿಸಿದರು.

ಸಂಘ ಪರಿವಾರದ ಈ ನಡೆಯನ್ನು ರಾಜ್ಯ ಕುರುಬರ ಸಂಘ ಹಾಗೂ ಜಿಲ್ಲೆಯ ಎಲ್ಲಾ ಹಿಂದುಳಿದ ವರ್ಗಗಳು ಹಾಗೂ ಶೋಷಿತ ವರ್ಗಗಳು ಇದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪಾಠ ಕಲಿಸುವ ಹಾಗೂ ಇಂತಹ ಕೃತ್ಯದ ವಿರುದ್ದ ಹೋರಾಟ ಮಾಡುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಕರಿಬಡ್ಡೆ ಶ್ರೀನಿವಾಸ್, ಲೋಕೇಶಪ್ಪ, ಜಿಲ್ಲಾಕಾಂಗ್ರೆಸ್ ಮುಖಂಡರುಗಳಾದ ಎನ್.ಡಿ ಚಂದ್ರಪ್ಪ, ಮೂರ್ತಿ ಅಡವೇಗೌಡ, ಉದ್ದೇಬೋರನಹಳ್ಳಿ ರಮೇಶ್, ಪುನೀತ್, ಜಗದೀಶ್ ಇದ್ದರು.

Demand for the arrest of the accused who searched the lake wall