ಮೂಡಿಗೆರೆ: ಜಿಲ್ಲೆಯಲ್ಲಿ ನಡೆದಿರುವ ಜಿಲ್ಲಾ, ತಾಲ್ಲೂಕು, ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನಗಳು ಪಾರದರ್ಶಕವಾಗಿ ನಡೆದಿವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ಶಾಸಕರ ಮಾದರಿ ಶಾಲೆಯ ಸಭಾಂಗಣದಲ್ಲಿ ಜಿಲ್ಲಾಮಟ್ಟದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ನಡೆದಿರುವ ಸಮ್ಮೇಳನಗಳು ಕನ್ನಡ ಭಾಷೆ, ನೆಲ, ಸಾಹಿತ್ಯ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿಯೇ ಸಾಗಿವೆ. ಕಳಸದಲ್ಲಿ ನಡೆದ ಜಿಲ್ಲಾ ಸಮ್ಮೇಳನ, ಸಾಣೆಹಳ್ಳಿಯಲ್ಲಿ ನಡೆದ ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರಗಳನ್ನು ಸದ್ಯದಲ್ಲಿ ಮಂಡನೆ ಮಾಡಲಿದ್ದೇವೆ. ಉಳಿದಂತೆ ಎಲ್ಲಾ ಸಮ್ಮೇಳನದ ಲೆಕ್ಕಪತ್ರಗಳು ಮಂಡನೆಯಾಗಿವೆ. ಜಿಲ್ಲೆಯಲ್ಲಿ ಕಸಾಪ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿದ್ದು, ಆಹ್ವಾನ ಪತ್ರಿಕೆ ಕಳುಹಿಸಲು ಲಕ್ಷಾಂತರ ರೂಪಾಯಿ ವೆಚ್ಚವಾಗುವುದರಿಂದ ಪತ್ರಿಕಾ ಪ್ರಕಟಣೆ ಮೂಲಕ ಆಹ್ವಾನಿಸಲಾಗುವುದು ಎಂದರು.

ಜಿಲ್ಲಾ ಸಾಹಿತ್ಯ ಸಮ್ಮೇಳನ ಕಾರ್ಯಾಧ್ಯಕ್ಷ ಬಿ.ಎಸ್. ಜಯರಾಮ್ ಮಾತನಾಡಿ, ಸಮ್ಮೇಳನದ ಲಾಂಛನ ಸುಂದರವಾಗಿ ಮೂಡಿ ಬಂದಿದೆ. ಕನ್ನಡ ತಾಯಿ ಭುವನೇಶ್ವರಿ, ಕಾಫಿ, ಕಾಳು ಮೆಣಸು, ಅಡಕೆ, ಚಹಾ ತೋಟ, ಹೊರನಾಡು, ಶೃಂಗೇರಿ ಕ್ಷೇತ್ರ, ಕಲ್ಲತ್ತಿಗಿರಿ ಕ್ಷೇತ್ರಗಳು, ಪೂರ್ಣಚಂದ್ರ ತೇಜಸ್ವಿ ಅವರ ಮನೆ ಸೇರಿದಂತೆ ಕಾಫಿನಾಡಿನ ಸೊಗಡನ್ನು ಬಿಂಬಿಸಲಾಗಿದೆ’ ಎಂದರು.

ಕೋಶಾಧ್ಯಕ್ಷ ಜೆ.ಎಸ್. ರಘು, ಕಸಾಪ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಹೊಸಕೆರೆ ರಮೇಶ್, ಮಗ್ಗಲಮಕ್ಕಿ ಗಣೇಶ್, ಬಾಲಕೃಷ್ಣ, ಮಂಚೇಗೌಡ, ಅನಿತಾ ಜಗದೀಪ್, ಹೊರಟ್ಟಿ ರಘು ಇದ್ದರು.

District level 19th Kannada Sahitya Sammelan logo release