ಬೆಂಗಳೂರು:  ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ರದ್ದು ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್‌ ಮೇ 30ಕ್ಕೆ ಮುಂದೂಡಿದೆ.

ಸಿಬಿಐ ತನಿಖೆ ರದ್ದು ಕೋರಿ ಪ್ರಶ್ನಿಸಿ ಡಿ.ಕೆ. ಶಿವಕುಮಾರ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್‌ ಹಾಜರಾಗಿ, ಸಿಬಿಐ ತನಿಖೆಗೆ ಶಿಫಾರಸು ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ಕುರಿತ ವಿಚಾರಣೆಯನ್ನು ಈಗಾಗಲೇ ಪೂರ್ಣಗೊಳಿಸಿರುವ ನಿಮ್ಮ ನ್ಯಾಯಪೀಠ (ನ್ಯಾ.ಕೆ. ನಟರಾಜನ್‌) ತೀರ್ಪು ಕಾಯ್ದಿರಿಸಿದೆ. ಒಂದೊಮ್ಮೆ ಸರ್ಕಾರದ ಆದೇಶವನ್ನು ನ್ಯಾಯಾಲಯವು ರದ್ದುಪಡಿಸಿದರೆ, ಈ ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಳ್ಳಲಿದೆ. ಆದ್ದರಿಂದ ನ್ಯಾಯಪೀಠವು ಮತ್ತೊಂದು ಅರ್ಜಿ ಕುರಿತ ತೀರ್ಪು ಪ್ರಕಟ ಮಾಡುವವರೆಗೂ ಈ ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ಕೋರಿದರು.

ಸಿಬಿಐ ವಕೀಲರು ಕೋರಿಕೆ ಪರಿಗಣಿಸಿದ ನ್ಯಾ.ಕೆ. ನಟರಾಜನ್‌ ಅವರ ಪೀಠ, ಅರ್ಜಿ ವಿಚಾರಣೆಯನ್ನು ಮೇ ಅಂತ್ಯಕ್ಕೆ ಮುಂದೂಡಿತು. ಅಲ್ಲದೆ, ಅರ್ಜಿ ಕುರಿತ ಮುಂದಿನ ವಿಚಾರಣೆಗೆ ಅರ್ಜಿದಾರ ಡಿ.ಕೆ. ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆಗೆ ನೀಡಿರುವ ತಡೆಯಾಜ್ಞೆ ಸಹ ವಿಸ್ತರಿಸಿ ಆದೇಶಿಸಿದರು.

ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸಿಬಿಐ 2020ರ ಅ.3ರಂದು ಡಿ.ಕೆ. ಶಿವಕುಮಾರ್‌ ವಿರುದ್ಧ ಪ್ರಕರಣ ದಾಖಲಿಸಿತ್ತು. ಸಿಬಿಐ ದಾಖಲಿಸಿರುವ ಈ ಎಫ್‌ಐಆರ್‌ ಕಾನೂನು ಬಾಹಿರವಾಗಿದ್ದು, ತನಿಖೆ ರದ್ದುಪಡಿಸಬೇಕು ಎಂದು ಕೋರಿ ಶಿವಕುಮಾರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಸಿಬಿಐ ತನಿಖೆಗೆ 2023ರ ಫೆ.10ರಂದು ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

DK is an illegal asset