ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟ-2022ರ ಟಿ20ಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಪರಾಭವಗೊಂಡಿದ್ದ ಭಾರತದ ಮಹಿಳೆಯರ ತಂಡ 2ನೇ ಪಂದ್ಯದಲ್ಲಿ ಎದುರಾಳಿ ಪಾಕಿಸ್ತಾನದ ಎದುರು ಸುಲಭ ಜಯ ಸಾಧಿಸಿದೆ.

ಪಾಕಿಸ್ತಾನ ನೀಡಿದ 100 ರನ್‌ಗಳ ಗುರಿ ಬೆನ್ನತ್ತಿದ್ದ ವನಿತೆಯರ ತಂಡ 11.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 102 ರನ್ ಸಿಡಿಸುವ ಮೂಲಕ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಮಂದಾನ ಬ್ಯಾಟಿಂಗ್‌ಗೆ ಮಂಕಾದ ಪಾಕ್: ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕರಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಉತ್ತಮ ಅಡಿಪಾಯ ಹಾಕಿಕೊಟ್ಟರು. ಪವರ್ ಪ್ಲೇ ಮುಗಿಯುವ ಹೊತ್ತಿಗೆ 5.5 ಓವರ್‌ಗಳಲ್ಲಿ 61 ರನ್ ಚಚ್ಚಿದ್ದರು. ಈ ವೇಳೆ 16 ರನ್ ಗಳಿಸಿದ್ದ ವರ್ಮಾ ಔಟಾದರು. ನಂತರ ಕ್ರೀಸ್‌ಗಿಳಿದ ಸಭಿನೇನಿ ಮೇಘನಾ 14 ರನ್ ಗಳಿಸಿ, ತಂಡ ಜಯದ ಹೊಸ್ತಿಲಲ್ಲಿದ್ದಾಗ ವಿಕೆಟ್ ಒಪ್ಪಿಸಿದರು.

ಅಜೇಯ ಆಟವಾಡಿದ ಮಂದಾನ ಕೇವಲ 42 ಎಸೆತಗಳಲ್ಲಿ 63 ರನ್ (3 ಸಿಕ್ಸರ್, 8 ಬೌಂಡರಿ) ಬಾರಿಸಿ, ಪಾಕ್ ಬೌಲರ್‌ಗಳ ಬೆವರಿಳಿಸಿದರು. ಕೊನೆಯವರೆಗೂ ಅಬ್ಬರಿಸಿದ ಮಂದಾನ ತಂಡವನ್ನು ಜಯದ ಹಾದಿಗೆ ತಂದು ನಿಲ್ಲಿಸಿದರು. ಮಂದಾನ ಜೊತೆ ಕೊನೆಯಲ್ಲಿ ಕಣಕ್ಕಿಳಿದ ಜೆಮಿಯಾ ರಾಡ್ರಿಗಸ್ 2 ರನ್ ಗಳಿಸಿ ಅಜೇಯರಾಗುಳಿದರು.

ಭಾರತ ಪರ ಸ್ನೇಹ್ ರಾಣಾ ಮತ್ತು ರಾಧಾ ಯಾದವ್ ತಲಾ ಎರಡು ವಿಕೆಟ್ ಉರುಳಿಸಿದರು. ರೇಣುಕಾ ಸಿಂಗ್, ಮೇಘನಾ ಸಿಂಗ್ ಮತ್ತು ಶಫಾಲಿ ವರ್ಮಾ ಒಂದೊಂದು ವಿಕೆಟ್ ಪಡೆದುಕೊಂಡರು.

ಮಳೆಯಿಂದಾಗಿ ಎರಡು ಓವರ್ ಕಡಿತಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ, ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ನಾಯಕಿ ಬಿಸ್ಮಾ ಮಹರೂಫ್ ಹಾಗೂ ಮುನೀಬಾ ಅಲಿ ಜೊತೆಗೂಡಿ 2ನೇ ವಿಕೆಟ್‌ಗೆ 50 ರನ್ ಪೇರಿಸಿದರು.

ಈ ವೇಳೆ ದಾಳಿಗಿಳಿದ ಸ್ನೇಹ್ ರಾಣಾ, ಮಹರೂಫ್ ವಿಕೆಟ್ ಪಡೆದು ಪೆಟ್ಟುಕೊಟ್ಟರು. ಇದಾದ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು ಪಾಕ್ ಪಡೆಗೆ ಮುಳುವಾಯಿತು.

Easy win for Indian women