ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆ ಅಡಿ ಫಲಾನುಭವಿಗಳು ಶನಿವಾರದಿಂದ ಬಳಕೆ ಮಾಡುವ ವಿದ್ಯುತ್‌ ಉಚಿತ ಆಗಲಿದೆ. ಗೃಹ ಬಳಕೆದಾರರು ಜು.1ರಿಂದ ಬಳಕೆ ಮಾಡುವ ಮಾಸಿಕ 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ಗೆ ಆಗಸ್ಟ್‌ನಲ್ಲಿ ‘ಶೂನ್ಯ ಬಿಲ್‌’ ಬರಲಿದೆ. ಇನ್ನು ಜೂನ್‌ನಲ್ಲಿ ಬಳಕೆ ಮಾಡಿರುವ ವಿದ್ಯುತ್‌ ಶುಲ್ಕದ ಬಗ್ಗೆ ಎಸ್ಕಾಂಗಳು ಈ ತಿಂಗಳು ಬಿಲ್‌ ನೀಡಲಿದ್ದು, ಅದನ್ನು ಪೂರ್ಣ ಪ್ರಮಾಣದಲ್ಲಿ ಪಾವತಿ ಮಾಡಬೇಕು. ಜೂ.1ರಿಂದ ಬಳಕೆಯಾಗುವ ಹಾಗೂ ಆಗಸ್ಟ್‌ 1ರ ಬಳಿಕ ರೀಡ್‌ (ಓದುವ) ಮಾಡಿ ನೀಡುವ ಬಿಲ್‌ಗೆ ಮಾತ್ರ ಗೃಹ ಜ್ಯೋತಿ ವಿನಾಯಿತಿ ಅನ್ವಯವಾಗಲಿದೆ.

ಎಸ್ಕಾಂಗಳು ಜುಲೈನ ಯಾವುದೇ ದಿನಾಂಕದಲ್ಲಿ ಬಿಲ್‌ ನೀಡಿದರೂ ಅದರ ಸಂಪೂರ್ಣ ಶುಲ್ಕವನ್ನು ಗ್ರಾಹಕರು ಪಾವತಿ ಮಾಡಬೇಕು ಎಂದು ಇಂಧನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಆಗಸ್ಟ್‌ 1 ಹಾಗೂ ನಂತರ ರೀಡ್‌ ಮಾಡುವ ಬಿಲ್‌ಗಳನ್ನು ಮಾತ್ರ ಪಾವತಿಸುವಂತಿಲ್ಲ. ಅದಕ್ಕೆ ಮೊದಲಿನ ಬಿಲ್‌ಗಳನ್ನು ಪಾವತಿಸಲೇಬೇಕು. ಜೂ.18ರಿಂದ ಯೋಜನೆಯಡಿ ಉಚಿತ ವಿದ್ಯುತ್‌ ಸೌಲಭ್ಯ ಪಡೆಯಲು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 2.14 ಕೋಟಿ ಫಲಾನುಭವಿಗಳನ್ನು ಗುರುತಿಸಿದ್ದು ಈವರೆಗೆ 86 ಲಕ್ಷ ಮಂದಿ ಯೋಜನೆಯ ಲಾಭ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಜುಲೈ 2023ರಲ್ಲಿ ಮಾಡಿದ ವಿದ್ಯುತ್‌ ಬಳಕೆಯನ್ನು ಆಗಸ್ಟ್‌ನಲ್ಲಿ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.

ಎಷ್ಟು ಬಳಕೆವರೆಗೆ ಉಚಿತ?: 2022-23ರ ಸರಾಸರಿ ವಿದ್ಯುತ್‌ ಬಳಕೆ ಪ್ರಮಾಣದ ಮೇಲೆ ಶೇ.10ರಷ್ಟು ಹೆಚ್ಚುವರಿ ವಿದ್ಯುತ್ತನ್ನು ಉಚಿತವಾಗಿ ಬಳಕೆ ಮಾಡಬಹುದು. ಆದರೆ, 200 ಯುನಿಟ್‌ ಮೀರಿದರೆ ಸಂಪೂರ್ಣ ಶುಲ್ಕ ಪಾವತಿಸಬೇಕು. ಯೋಜನೆಯ ಫಲಾನುಭವಿಯಾಗಿದ್ದು ಯಾವುದಾದರೂ ಒಂದು ತಿಂಗಳಲ್ಲಿ ಮಾತ್ರ 200 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸಿದರೆ ಆ ನಿಗದಿತ ತಿಂಗಳ ಬಿಲ್‌ ಮಾತ್ರ ಪೂರ್ತಿ ಪಾವತಿಸಬೇಕು. ಮುಂದಿನ ತಿಂಗಳಿಂದ ಯೋಜನೆಯ ಲಾಭ ಮುಂದುವರೆಯಲಿದೆ.

ಹೆಚ್ಚುವರಿ ಬಿಲ್‌ ಪಾವತಿಸದಿದ್ದರೂ ಪವರ್‌ ಕಟ್‌: ಒಂದು ವೇಳೆ ಯೋಜನೆಯ ಫಲಾನುಭವಿಯು 200 ಯುನಿಟ್‌ಗಿಂತ ಕಡಿಮೆ ಹಾಗೂ ತನಗೆ ನಿಗದಿಪಡಿಸಿರುವ ಯುನಿಟ್‌ಗಳಿಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡಿದರೆ ಹೆಚ್ಚುವರಿ ಯುನಿಟ್‌ ಬಳಕೆಯ ಬಿಲ್‌ ಪಾವತಿಸಬೇಕು. ಆ ಹೆಚ್ಚುವರಿ ಬಿಲ್‌ ಪಾವತಿಸದಿದ್ದರೆ ಗೃಹ ಜ್ಯೋತಿಯಿಂದ ಅವರನ್ನು ಅನರ್ಹಗೊಳಿಸುವುದಿಲ್ಲ. ಬದಲಿಗೆ ವಿದ್ಯುತ್‌ ಸಂಪರ್ಕವನ್ನೇ ಕಡಿತ ಮಾಡಲಾಗುವುದು. ಬಾಕಿ ಪಾವತಿಸಿದ ಬಳಿಕ ಯೋಜನೆ ಸೌಲಭ್ಯ ಹಾಗೂ ವಿದ್ಯುತ್‌ ಸಂಪರ್ಕ ಪಡೆಯಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

* ಜುಲೈ ವಿದ್ಯುತ್‌ ಬಳಕೆ 200 ಯುನಿಟ್‌ ಒಳಗಿದ್ದರೆ ಆಗಸ್ಟ್‌ 1ರಿಂದ ಶೂನ್ಯ ಬಿಲ್‌
* ವಾರ್ಷಿಕ 13,000 ಕೋಟಿ ರು. ಆರ್ಥಿಕ ಹೊರೆ
* ಒಟ್ಟು ಫಲಾನುಭವಿಗಳ ಸಂಖ್ಯೆ 2.14 ಕೋಟಿ
* ಶುಕ್ರವಾರದ ವೇಳೆಗೆ 86.24 ಲಕ್ಷ ಅರ್ಜಿ ಸಲ್ಲಿಕೆ

ಅರ್ಜಿ ಸಲ್ಲಿಕೆ ಹೇಗೆ?: ಸೇವಾಸಿಂಧು ಪೋರ್ಟಲ್‌ನಲ್ಲಿ https://sevasindhugs.karnataka.gov.in ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಂಪ್ಯೂಟರ್‌, ಮೊಬೈಲ್‌ಗಳಿಂದ ಅರ್ಜಿ ಸಲ್ಲಿಸಬಹುದು. ಉಳಿದವರು ಕರ್ನಾಟಕ ಒನ್‌, ಬೆಂಗಳೂರು ಒನ್‌, ಗ್ರಾಮ ಒನ್‌, ವಿದ್ಯುತ್‌ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.

ಆಗಸ್ಟ್‌ 1ರ ಬಳಿಕ ನೀಡುವ ಬಿಲ್‌ ಮಾತ್ರ ಉಚಿತ: ಇಂಧನ ಇಲಾಖೆಯು ಆಗಸ್ಟ್‌ 1 ಅಥವಾ ಬಳಿಕ ಮೀಟರ್‌ ರೀಡಿಂಗ್‌ (ಮಾಪನ ಓದುವುದು) ಮಾಡುವ ಬಿಲ್‌ ಮಾತ್ರ ಉಚಿತವಾಗಲಿದೆ ಎಂದು ಹೇಳಿದೆ. ಹಾಗಾದರೆ ಜುಲೈ 15 ಅಥವಾ 20 ರವರೆಗೆ ಬಳಕೆ ಮಾಡಿರುವ ವಿದ್ಯುತ್‌ಗೆ ಜು.25 ರಂದು ಬಿಲ್‌ ನೀಡಿದರೂ ಅದು ಗೃಹ ಜ್ಯೋತಿ ಯೋಜನೆಯಡಿ ಬರುವುದಿಲ್ಲ. ಹಾಗಾದರೆ ಜು.1ರಿಂದ ಬಳಕೆಯಾಗುವ ವಿದ್ಯುತ್‌ ಉಚಿತ ಎಂದು ಹೇಳಿರುವ ಭರವಸೆ ಸುಳ್ಳಾಗಲಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟೀಕರಣ ಕೇಳಿದರೆ ಆಗಸ್ಟ್‌ 1 ರ ಬಳಿಕದ ರೀಡಿಂಗ್‌ ಮಾತ್ರ ಉಚಿತ ಎಂದಷ್ಟೇ ಹೇಳುತ್ತಿದ್ದು, ಇದರಿಂದ ತೀವ್ರ ಗೊಂದಲ ಶುರುವಾಗಿದೆ.

Electricity up to 200 units is free from today