ಕೊಚ್ಚಿ:  ಮಲಯಾಳಂ ಸಿನಿಮಾದ ಖ್ಯಾತ ನಟ, ಮಾಜಿ ಸಂಸದ ಇನ್ನೋಸೆಂಟ್‌ (75) ಅವರು ಅನಾರೋಗ್ಯ ಕಾರಣದಿಂದ ಭಾನುವಾರ ನಿಧನರಾದರು. ಶನಿವಾರ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದಗೇ ಅವರು ವಿಧಿವಶರಾಗಿದ್ದಾರೆ. ಇನ್ನೋಸೆಂಟ್‌ ಅವರು 2014-19ನೇ ಲೋಕಸಭಾ ಅವಧಿಯಲ್ಲಿ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು.

1972ರಲ್ಲಿ ತಮ್ಮ ವಿಶೇಷವಾದ ಕಾಮಿಡಿ ವಿಧಾನದಿಂದ ಭಾರಿ ಜನಪ್ರಿಯತೆ ಗಳಿಸಿದ್ದ ಇನ್ನೋಸೆಂಟ್‌ ಅವರು ಸುಮಾರು 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾನಾ ಪಾತ್ರಗಳನ್ನು ನಿಭಾಯಿಸಿದ್ದಾರೆ. 2012ರಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಬದುಕುಳಿದಿದ್ದರು. ಆದರೆ, ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಮಾರ್ಚ್ 3ರಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನು ಹಲವಾರು ವರ್ಷಗಳ ಕಾಲ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿಯೂ ಇನ್ನೋಸೆಂಟ್‌ ಸೇವೆ ಸಲ್ಲಿಸಿದ್ದಾರೆ.

ಮಲಯಾಳಿ ನಿರ್ದೇಶಕ ಜೋಸೆಫ್‌ ನಿಧನ: ತನ್ನ ಮೊದಲ ಚಿತ್ರ ಬಿಡುಗಡೆಯಾಗುವ ಕೆಲವೇ ದಿನಗಳ ಮುಂಚೆ ಮಲಯಾಳಂ ನಿರ್ದೇಶಕ ಜೋಸೆಫ್‌ ಮನು ಜೇಮ್ಸ್‌ (31) ಅನಾರೋಗ್ಯದಿಂದ ಫೆ.24ರ ಶುಕ್ರವಾರ ಮೃತ ಪಟ್ಟಿರುವ ದುರದೃಷ್ಟಕರ ಘಟನೆ ನಡೆದಿದೆ. ಹೆಪಟೈಟಿಸ್‌ ರೋಗದಿಂದ ಬಳಲುತ್ತಿದ್ದ ಜೋಸೆಫ್‌, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರ ನಿರ್ದೇಶನದ ‘ನ್ಯಾನ್ಸಿ ರಾಣಿ’ ಚಿತ್ರ ಬಿಡುಗಡೆಗೆ ತಯಾರಾಗಿತ್ತು. ಕನ್ನಡ, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಜೋಸೆಫ್‌ 2004ರಲ್ಲಿ ಬಾಲನಟನಾಗಿಯೂ ನಟಿಸಿದ್ದರು. ಭಾನುವಾರ ಅವರ ಅಂತ್ಯಕ್ರಿಯೆ ನೇರವೇರಿಸಲಾಗಿದ್ದು ಅನೇಕ ಸಿನಿಮಾ ಗಣ್ಯರು ಜೋಸೆಫ್‌ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Former MP Innocent passed away