ಚಿಕ್ಕಮಗಳೂರು: ಗೋಬ್ಯಾಕ್ ಚಳವಳಿ ಕಾಂಗ್ರೆಸ್ ಸಂಸ್ಕೃತಿಯಲ್ಲ. ಅದು ಆರ್‌ಎಸ್‌ಎಸ್ ಸಂಸ್ಕೃತಿ. ನಮ್ಮಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿ ಟಿಕೆಟ್ ನೀಡುತ್ತದೋ ಅಂತವರಿಗೆ ಸಂಪೂರ್ಣ ಬೆಂಬಲ ನೀಡಲಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ತಿಳಿಸಿದರು

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಆರಂಭವಾಗಿರುವ ಗೋಬ್ಯಾಕ್ ಚಳವಳಿಯ ಹಿಂದೆ ಕಾಣದ ಕೈಗಳಿವೆ. ಅವರು ಆರ್‌ಎಸ್‌ಎಸ್ ಮನಸ್ಥಿತಿ ಹೊಂದಿದವರಾಗಿರುತ್ತಾರೆ. ಒಂದು ವೇಳೆ ನಮ್ಮದೇ ಪಕ್ಷದ ಕಾರ್ಯಕರ್ತರಾಗಿದ್ದರೆ ಅವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಹೈಕಮಾಂಡ್‌ಗೆ ವಿಷಯ ತಿಳಿಸಿದ್ದೇವೆ ಎಂದರು.

ಲೋಕಸಭಾ ಚುನಾವಣಾ ಹೊಸ್ತಿಲಲ್ಲಿರುವ ಈ ಸಂದರ್ಭ ಕಾಂಗ್ರೆಸ್ ಪಕ್ಷದಲ್ಲಿ ಗೋಬ್ಯಾಕ್ ಚಳವಳಿ ಆರಂಭಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಲೆನಾಡಿನಲ್ಲಿ ಡೀಮ್ಡ್ ಅರಣ್ಯ ಭೂಮಿಯಿಂದ ಬಡವರಿಗೆ ನಿವೇಶನ ನೀಡಲಾಗುತ್ತಿಲ್ಲ.ಸರಕಾರಿ ಕಟ್ಟಡ ನಿರ್ಮಿಸಲು ಜಾಗವಿಲ್ಲ. ಅರಣ್ಯ ಪ್ರದೇಶದ ಜತೆಗೆ ಇಡೀ ಊರನ್ನೇ ಡೀಮ್ಡ್ ವ್ಯಾಪ್ತಿಗೆ ಸೇರಿಸಲಾಗಿದೆ. ಇದು ಮುಂದೊಂದು ದಿನ ಬಡವರ ನೆತ್ತಿ ಮೇಲಿನ ತೂಗು ಗತ್ತಿಯಾಗಿದೆ ಎಂದು ಆತಂಕಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಾಫಿ ಬೆಳೆಗಾರರ ಒತ್ತುವರಿ ಭೂಮಿಯಲ್ಲಿ ೧೦ ಎಕರೆ ಲೀಸ್ ಕೊಡುವುದಾಗಿ ಭರವಸೆ ನೀಡಿದ್ದಾರೆ. ಅದರ ಜತೆಗೆ ಬಡವರು, ಕೂಲಿಕಾರ್ಮಿಕರು, ದಲಿತ ವರ್ಗ ಮನೆ ಕಟ್ಟಿಕೊಳ್ಳಲು ಅವರಿಗೂ ಭೂಮಿ ನೀಡಿದಲ್ಲಿ ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸಿದಂತಾಗುತ್ತದೆ. ಬಡವರಿಗೆ ಡೀಮ್ಡ್‌ಭೂಮಿ ವಿತರಿಸುವ ತೀರ್ಮಾನವನ್ನು ಸರಕಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈಗಿರುವ ಮೀಸಲು ಅರಣ್ಯ , ನೆಡುತೋಪುಗಳು ಹಾಗೆ ಇರಲಿ . ಆದರೆ, ಇತ್ತೀಚೆಗೆ ಕಂದಾಯ ಇಲಾಖೆಯಿಂದ ನಿರ್ವಹಣೆಗಾಗಿ ಪಡೆದಿರುವ ಡೀಮ್ಡ್ ಭೂಮಿಯನ್ನು ಪುನಾ ಕಂದಾಯ ಇಲಾಖೆಗೆ ಬಿಡುಗಡೆ ಮಾಡಬೇಕು. ಬಿಡುಗಡೆ ಮಾಡದಿದ್ದರೆ ಬಡವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು. ಈ ಬಗ್ಗೆ ಜಿಲ್ಲೆಯ ೫ ಶಾಸಕರು ಸದನದಲ್ಲಿ ಮಾತನಾಡಿ ಡೀಮ್ಡ್ ಕಳಂಕವನ್ನು ಅಳಿಸಿ ಹಾಕುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡರಾದ ಕೆ.ಮೊಹಮದ್, ಹಿರೇಮಗಳೂರು ರಾಮಚಂದ್ರ, ಶಾಂತಕುಮಾರ್ ಇದ್ದರು.

Goback movement is not Congress culture