ನಾವು ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲೊಂದು ಫೇಮಸ್ ಅಡುಗೆ ಅಥವಾ ತಿಂಡಿ ಎಂಬುದು ಇದ್ದೇ ಇರುತ್ತದೆ. ಭಾರತದ ಸಣ್ಣ ಪುಟ್ಟ ಪ್ರದೇಶಗಳಲ್ಲೂ ಅದೆಷ್ಟೋ ಸಾಂಪ್ರದಾಯಿಕ ಖಾದ್ಯಗಳಿವೆ. ನಾವಿಂದು ಗೋಕಾಕ್‌ನ ಫೇಮಸ್ ಸಿಹಿ ಒಣ ಹಣ್ಣುಗಳಿಂದ ತಯಾರಿಸಲಾಗುವ ಕರದಂಟು (Karadantu) ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ.

ಬೇಕಾಗುವ ಪದಾರ್ಥಗಳು:
ತುಪ್ಪ – ಕಾಲು ಕಪ್
ಗೊಂದ್ – 50 ಗ್ರಾಂ
ಕತ್ತರಿಸಿದ ಬಾದಾಮಿ – ಕಾಲು ಕಪ್
ಕತ್ತರಿಸಿದ ಗೋಡಂಬಿ – ಕಾಲು ಕಪ್
ಕತ್ತರಿಸಿದ ಪಿಸ್ತಾ – 2 ಟೀಸ್ಪೂನ್
ಕತ್ತರಿಸಿದ ಅಂಜೂರ – ಕಾಲು ಕಪ್
ಒಣದ್ರಾಕ್ಷಿ – 2 ಟೀಸ್ಪೂನ್
ಒಣ ಕುಂಬಳಕಾಯಿ ಬೀಜ – 2 ಟೀಸ್ಪೂನ್
ಒಣ ತೆಂಗಿನ ತುರಿ – 1 ಕಪ್
ಗಸಗಸೆ – 2 ಟೀಸ್ಪೂನ್
ತುಪ್ಪ – 2 ಟೀಸ್ಪೂನ್
ಕತ್ತರಿಸಿದ ಒಣ ಖರ್ಜೂರ – 5 (ಬೀಜ ಬೇರ್ಪಡಿಸಿ)
ಬೆಲ್ಲ – 1 ಕಪ್
ನೀರು – ಕಾಲು ಕಪ್
ಜಾಯಿಕಾಯಿ ಪುಡಿ – ಕಾಲು ಟೀಸ್ಪೂನ್
ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್

ಮಾಡುವ ವಿಧಾನ:
* ಮೊದಲಿಗೆ ಪ್ಯಾನ್‌ನಲ್ಲಿ ಕಾಲು ಕಪ್ ತುಪ್ಪ ಮತ್ತು ಕಾಲು ಕಪ್ ಗೊಂದ್ ತೆಗೆದುಕೊಳ್ಳಿ. ಗೊಂದ್ ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ಬಳಿಕ ಅದನ್ನು ಪಕ್ಕಕ್ಕಿಡಿ.
* ಈಗ ಉಳಿದ ತುಪ್ಪದಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ, ಅಂಜೂರ, ಒಣದ್ರಾಕ್ಷಿ ಮತ್ತು ಕುಂಬಳಕಾಯಿ ಬೀಜಗಳನ್ನು ಸೇರಿಸಿ ಗರಿಗರಿಯಾಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ಬಳಿಕ ಅದನ್ನು ಪಕ್ಕಕ್ಕಿರಿಸಿ.
* ಒಣ ತೆಂಗಿನ ತುರಿಯನ್ನು ಪ್ಯಾನ್‌ಗೆ ಹಾಕಿ, ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ.
* ಇದೀಗ ಒಂದು ದೊಡ್ಡ ಬಟ್ಟಲು ತೆಗೆದುಕೊಂಡು, ಹುರಿದ ಎಲ್ಲಾ ಪದಾರ್ಥಗಳನ್ನೂ (ಗೋಂದ್, ಒಣ ಹಣ್ಣುಗಳು, ತೆಂಗಿನ ತುರಿಯನ್ನು) ಅದಕ್ಕೆ ಹಾಕಿ, ಮಿಶ್ರಣ ಮಾಡಿ.
* ಈಗ ಒಂದು ಕಡಾಯಿಯಲ್ಲಿ 2 ಟೀಸ್ಪೂನ್ ತುಪ್ಪ ಬಿಸಿ ಮಾಡಿ, ಅದಕ್ಕೆ ಒಣ ಖರ್ಜೂರ ಹಾಕಿ ಹುರಿದುಕೊಳ್ಳಿ.

* ಅದಕ್ಕೆ ಬೆಲ್ಲ ಹಾಗೂ ನೀರು ಸೇರಿಸಿ, ಬೆಲ್ಲವನ್ನು ಚೆನ್ನಾಗಿ ಕರಗಿಸಿಕೊಳ್ಳಿ.
* ಮಿಶ್ರಣ ನೊರೆನೊನೆರೆಯಾಗುತ್ತಿದ್ದಂತೆ ಅದಕ್ಕೆ ಹುರಿದಿಟ್ಟಿದ್ದ ಪದಾರ್ಥಗಳನ್ನು ಹಾಕಿ, ಜಾಯಿಕಾಯಿ ಪುಡಿ ಹಾಗೂ ಏಲಕ್ಕಿ ಪುಡಿ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಒಂದು ಟ್ರೇ ತೆಗೆದುಕೊಂಡು, ಅದಕ್ಕೆ ಬೇಕಿಂಗ್ ಪೇಪರ್ ಹಾಕಿ, ಅದರ ಮೇಲೆ ಮಿಶ್ರಣವನ್ನು ಸುರಿಯಿರಿ.
* ಮಿಶ್ರಣ ಸೆಟ್ ಆಗಲು 30 ನಿಮಿಷ ಹಾಗೆಯೇ ಬಿಡಿ.
* ಬಳಿಕ ಚಾಕು ಸಹಾಯದಿಂದ ನಿಮಗೆ ಬೇಕಾದ ಆಕಾರಕ್ಕೆ ತುಂಡುಗಳಾಗಿ ಕತ್ತರಿಸಿಕೊಳ್ಳಿ.
* ಇದೀಗ ಕರದಂಟು ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನು ನೀವು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟ್ಟರೆ 1 ತಿಂಗಳ ವರೆಗೆ ಬೇಕೆಂದಾಗ ಸವಿಯಬಹುದು.4

Gōkāk‌na phēmas karadaṇṭu