ಬೆಂಗಳೂರು: ಮುಂದಿನ ಐದು ದಿನದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದ್ದು, ಈವರೆಗೆ ಉಂಟಾಗಿರುವ ಮಳೆ ಕೊರತೆ ಕಡಿಮೆ ಆಗಲಿದೆ. ವಿಶೇಷವಾಗಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ 115 ಮಿ.ಮೀ.ನಿಂದ 204 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಆರೆಂಜ್‌ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಸಹ ಮುಂದಿನ ಐದು ದಿನ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಎಲ್ಲೋ’ ಮತ್ತು ‘ಆರೆಂಜ್‌ ಅಲರ್ಟ್‌’ ಮುನ್ಸೂಚನೆ ನೀಡಲಾಗಿದೆ. ಜುಲೈ 4ರಿಂದ ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮತ್ತಷ್ಟು ಹೆಚ್ಚಾಗಲಿದ್ದು, ತುಮಕೂರು, ಮೈಸೂರು, ಹಾಸನ, ಬೆಳಗಾವಿ, ಹಾವೇರಿ, ಧಾರವಾಡ ಜಿಲ್ಲೆಗಳಿಗೂ ‘ಎಲ್ಲೋ ಅಲರ್ಟ್‌’ಎಚ್ಚರಿಕೆ ನೀಡಲಾಗಿದೆ.

ಕಳೆದ 10 ದಿನದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಮಳೆ ಕೊರತೆ ಪ್ರಮಾಣ ಶೇ.51ಕ್ಕೆ ಇಳಿಕೆಯಾಗಿದೆ. ಜೂನ್‌ 1ರಿಂದ ಈವರೆಗೆ ಒಟ್ಟು 21.7 ಸೆಂ.ಮೀ.ಮಳೆಯಾಗಬೇಕಾಗಿತ್ತು. ಆದರೆ 10.6 ಸೆಂ.ಮೀ ಮಳೆಯಾಗಿದೆ. ಕಳೆದ ಜೂನ್‌ 21ರಂದು ಶೇ.74ರಷ್ಟುಮಳೆ ಕೊರತೆ ಇತ್ತು.

ಕರಾವಳಿ ಜಿಲ್ಲೆಗಳಲ್ಲಿ ಈವರೆಗೆ 93.6 ಸೆಂ.ಮೀ. ಮಳೆಯಾಗಬೇಕಿತ್ತು. ಸದ್ಯ 50.3 ಸೆಂ.ಮೀ. ಮಳೆಯಾಗಿದ್ದು, ಶೇ.46ರಷ್ಟುಮಳೆ ಕೊರತೆ ಇದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ 11.1 ಸೆಂ.ಮೀ. ಮಳೆಯ ಬದಲು 5.1 ಸೆಂ.ಮೀ. ಮಳೆಯಾಗಿದೆ. ಶೇ.55ರಷ್ಟುಕೊರತೆ ಇದೆ. ದಕ್ಷಿಣ ಒಳನಾಡಿನಲ್ಲಿ 16.1 ಸೆಂ.ಮೀ. ಮಳೆಯ ಬದಲು 7.4 ಸೆಂ.ಮೀ. ಮಳೆಯಾಗಿದೆ. ಈ ಮೂಲಕ ಮಳೆ ಕೊರತೆ ಪ್ರಮಾಣ ಶೇ.54ಕ್ಕೆ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈವರೆಗೆ ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಬೀದರ್‌ನಲ್ಲಿ ವಾಡಿಕೆ ಮಳೆಯಾಗಿದೆ. ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ, ದಾವಣಗೆರೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ, ರಾಮನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿದೆ. ಕೊಡಗು, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ, ಧಾರವಾಡ, ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ವಾಡಿಕೆ ಪ್ರಮಾಣಕ್ಕಿಂತ ಅತಿ ಹೆಚ್ಚಿನ ಪ್ರಮಾಣ ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Good rain in the state for next five days