ವಾಷಿಂಗ್ಟನ್: ಆಪಲ್ ಬಳಿಕ ಇದೀಗ ಗೂಗಲ್(Google) ಕೂಡಾ ತನ್ನ ಕೆಲವು ಪಿಕ್ಸೆಲ್ ಫೋನ್‌ಗಳನ್ನು(Pixel Phone) ಭಾರತದಲ್ಲಿ ತಯಾರಿಸಲು ಯೋಜಿಸುತ್ತಿದೆ. ಗೂಗಲ್ ಭಾರತದಲ್ಲಿಯೇ(India) ಸುಮಾರು 5 ಲಕ್ಷದಿಂದ 10 ಲಕ್ಷದವರೆಗೆ ಪಿಕ್ಸೆಲ್ ಫೋನ್‌ಗಳನ್ನು ತಯಾರಿಸುವ ಬಗ್ಗೆ ಯೋಜನೆ ರೂಪಿಸಿರುವುದಾಗಿ ವರದಿಯಾಗಿದೆ.

ಜಾಗತಿಕ ಬೇಡಿಕೆ, ಪೂರೈಕೆಯ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳನ್ನು ಉಲ್ಲೇಖಿಸಿ ಗೂಗಲ್ ಕಳೆದ 3 ವರ್ಷಗಳಿಂದ ಭಾರತದಲ್ಲಿ ತನ್ನ ಪ್ರಮುಖ ಫೋನ್‌ಗಳನ್ನು ಬಿಡುಗಡೆ ಮಾಡಿರಲಿಲ್ಲ. ಇದೀಗ ಗೂಗಲ್ ತನ್ನ ಫೋನ್‌ಗಳನ್ನು ಭಾರತದಲ್ಲಿಯೇ ತಯಾರಿಸಲು ಯೋಜಿಸಿದ್ದು, ಇದು ಕಾರ್ಯಗತವಾಯಿತು ಎಂದಾದರೆ ಭಾರತ ವಿಧಿಸುವ ಶೇ.20 ರಷ್ಟು ಆಮದು ಸುಂಕವನ್ನು ಉಳಿತಾಯ ಮಾಡಬಹುದಾಗಿದೆ.

ಗೂಗಲ್ ಈ ಹಿಂದೆ ಪಿಕ್ಸೆಲ್ ಫೋನ್‌ಗಳನ್ನು ಚೀನಾದಲ್ಲಿ(China) ತಯಾರಿಸಲು ಪ್ರಾರಂಭಿಸಿತ್ತು. 2019ರಲ್ಲಿ ಅಮೆರಿಕ(America) ಹಾಗೂ ಚೀನಾ ನಡುವೆ ವ್ಯಾಪಾರದ ಉದ್ವಿಗ್ನತೆ ಉಂಟಾಗಿ, ತನ್ನ ತಯಾರಿಕಾ ಸ್ಥಳವನ್ನು ವಿಯೆಟ್ನಾಂಗೆ ಬದಲಾಯಿಸಲು ನಿರ್ಧರಿಸಿತ್ತು. ಆದರೂ ಕೋವಿಡ್ ಪ್ರಭಾವದಿಂದಾಗಿ ಪಿಕ್ಸೆಲ್‌ನ 6ನೇ ಸರಣಿಯನ್ನು ಚೀನಾದಲ್ಲಿಯೇ ತಯಾರಿಸಬೇಕಾಯಿತು.

ಇದೀಗ ಕಂಪನಿ ತನ್ನ ಕೆಲವು ಸಾಧನಗಳನ್ನು ಸಂಗ್ರಹಿಸಲು ಕಷ್ಟಪಡುತ್ತಿರುವ ಕಾರಣ ಫೋನ್ ಉತ್ಪಾದನೆಯನ್ನು ಚೀನಾದಿಂದ ಸ್ಥಳಾಂತರಿಸಲು ಮತ್ತೊಮ್ಮೆ ಯೋಜಿಸುತ್ತಿದೆ. ಈ ಬಾರಿ ಪಿಕ್ಸೆಲ್‌ನ ಉತ್ಪಾದನಾ ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸುವ ಬಗ್ಗೆ ಮಾತುಕತೆ ನಡೆದಿರುವುದಾಗಿ ವರದಿಯಾಗಿದೆ.

ಆಪಲ್ ಕಂಪನಿಯ ಐಫೋನ್‌ಗಳನ್ನು ಫಾಕ್ಸ್‌ಕಾನ್ ಮತ್ತು ವಿಸ್ಟ್ರಾನ್ ಕಂಪನಿ ತಯಾರಿಸುತ್ತಿದೆ. ಈಗಾಗಲೇ ಫಾಕ್ಸ್‌ಕಾನ್ ಚೆನ್ನೈನಲ್ಲಿ ಘಟಕ ತೆರೆದಿದ್ದರೆ ವಿಸ್ಟ್ರಾನ್ ಕಂಪನಿ ಬೆಂಗಳೂರಿನ ಬಿಡದಿ ಮತ್ತು ಕೋಲಾರದ ನರಸಪುರದಲ್ಲಿ ಘಟಕ ತೆರೆದಿದೆ.

Google plans to make Pixel phone in India