ಬೆಂಗಳೂರು: ಬೆಂಗಳೂರಿನ ಪಾರ್ಕಿಂಗ್ ನೀತಿ 2.0 ಗೆ ಸಂಬಂಧಿಸಿದಂತೆ ನಗರ ಭೂ ಸಾರಿಗೆ ನಿರ್ದೇಶನಾಲಯ(ಡಿಯುಎಲ್ ಟಿ) ಕಳುಹಿಸಿದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ರಸ್ತೆಗಳಲ್ಲಿ ನಿಲ್ಲಿಸುವ ಪ್ರತಿಯೊಂದು ವಾಹನಗಳಿಗೆ ಹಣಪಾವತಿ ಮಾಡಬೇಕಾಗಿದೆ.

ಬಿಬಿಎಂಪಿಯು ಪಾರ್ಕಿಂಗ್ ದರವನ್ನು ನಿಗದಿಪಡಿಸಿ ನಂತರ ಟೆಂಡರ್ ಕರೆಯಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ತಿಳಿಸಿದ್ದಾರೆ.

ಸ್ಥಳವನ್ನು ಆಧರಿಸಿ ಗಂಟೆಗೆ ಸುಮಾರು 25 ರಿಂದ 75 ರೂ. ಪಾರ್ಕಿಂಗ್ ಶುಲ್ಕ ವಿಧಿಸಲು ಡಿಯುಎಲ್ ಟಿ ಪ್ರಸ್ತಾವನೆ ಸಲ್ಲಿಸಿದೆ. ಟ್ರಾಫಿಕ್ ಅನ್ನು ಸುಗಮಗೊಳಿಸಲು, ವಾಹನ ಮಾಲೀಕರಲ್ಲಿ ಶಿಸ್ತು ತರಲು, ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆ ಬಳಸಲು ಜನರನ್ನು ಉತ್ತೇಜಿಸಲು ಈ ಪಾರ್ಕಿಂಗ್ ನೀತಿ ಜಾರಿಗೆ ತರಲಾಗುತ್ತಿದೆ.

ಈ ಹಿಂದೆ ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಸೇಂಟ್ ಮಾರ್ಕ್ಸ್ ರಸ್ತೆ ಸೇರಿದಂತೆ ಹತ್ತು ರಸ್ತೆಗಳಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಈಗ ನಗರದ ಹೆಚ್ಚಿನ ರಸ್ತೆಗಳನ್ನು ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.

ಡಿಯುಎಲ್ ಟಿ ಸಂಸ್ಥೆಯು ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಬಳಕೆಯ ಪ್ರಮಾಣ ಹೆಚ್ಚಳ ಹಾಗೂ ಖಾಸಗಿ ವಾಹನಗಳ ನಿಯಂತ್ರಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ, ಸರ್ಕಾರಕ್ಕೆ ತನ್ನ ಸಮಗ್ರ ಅಧ್ಯಯನ ವರದಿಯನ್ನು ಸಲ್ಲಿಸಿತ್ತು. ಈ ಪಾರ್ಕಿಂಗ್ ಪಾಲಿಸಿ-2.0ಕ್ಕೆ ಈಗ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

Green signal for Bengaluru parking policy 2.0