ಚಿಕ್ಕಮಗಳೂರು:  ರಾಜ್ಯ ಸರಕಾರದ ಗ್ಯಾರಂಟಿಗಳು ಬದುಕಿನ ಯೋಜನೆಗಳೆ ವಿನಾ ಬಿಟ್ಟಿ ಅಲ್ಲ. ಗ್ಯಾರಂಟಿ ಬಿಟ್ಟಿ ಯೋಜನೆ ಎಂದು ಅಪಹಾಸ್ಯ ಮಾಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಹೇಳಿಕೆ ಖಂಡನೀಯ ಎಂದು ಕೆಪಿಸಿಸಿ ವಕ್ತಾರ ರವೀಶ್‌ಬಸಪ್ಪ ಆರೋಪಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿರ್ಮಲಾಸೀತಾರಾಮನ್ ಅವರು ಈ ನಾಡಿನ ಬಡವರ, ರೈತ ಕಾರ್ಮಿಕರ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಅವರ ದನಿಯಲ್ಲ ಬದಲಾಗಿ ಬಿಜೆಪಿ ದನಿ ಎಂದು ಹೇಳಬೇಕಾಗುತ್ತದೆ. ಬಿಜೆಪಿಗೆ ಹಸಿದವರ ನೋವು ಅರ್ಥವಾಗುವುದಿಲ್ಲ ಎಂದು ದೂರಿದರು.

ದೇಶದಲ್ಲಿ ಯಾರೂ ಕೂಡ ಹಸಿವಿನಿಂದ ಇರಬಾರದು ಎಂಬುದು ಕಾಂಗ್ರೆಸ್ ಆಶಯ. ಆದರೆ , ಬಿಜೆಪಿ ಸರಕಾರದ ಧೋರಣೆ ರೈತ ವಿರೋಧಿ, ಕಾರ್ಮಿಕ ವಿರೋಧಿ, ಕೆಳವರ್ಗದ ಜನರ ವಿರೋ ನಿಲುವಾಗಿದೆ. ಎನ್‌ಡಿಆರ್‌ಎಫ್ ಅನುದಾನದ ಬಗ್ಗೆ ಸೀತರಾಮನ್ ಮಾತನಾಡುವುದಿಲ್ಲ. ನಮ್ಮ ತೆರಿಗೆ ಹಣವನ್ನು ವಿಪತ್ತು ಬಂದಿರುವ ಈ ಸಂದರ್ಭದಲ್ಲಿ ಕೇಳುತ್ತಿದ್ದೇವೆ. ಆದರೆ, ಅನುದಾನ ಬಿಡುಗಡೆ ಮಾಡದ ಮೋದಿ ನೇತೃತ್ವದ ಬಿಜೆಪಿ ಸರಕಾರ ಹೃದಯ ಹೀನ ಸರಕಾರ ಎಂದು ದೂಷಿಸಿದರು.

ಚುನಾವಣಾ ಬಾಂಡ್ ಬಿಜೆಪಿಯ ಬಹುದೊಡ್ಡ ಭ್ರಷ್ಟ ಮುಖ ಅನಾವರಣಗೊಳಿಸಿದೆ. ಸರಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಹಣದ ದಂದೆ ಮಾಡುತ್ತಿರುವ ಬಿಜೆಪಿ ಸರಕಾರ ಪ್ರತಿಪಕ್ಷಗಳ ದನಿ ಅಡಗಿಸುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಇಡಿ, ಐಟಿ ಬಳಸಿ ಪ್ರತಿ ಪಕ್ಷದವರ ಮೇಲೆ ಅಕಾರ ದುರ್ಬಳಕೆ ಮಾಡಿ ಸರ್ವಾಧಿಕಾರ ತೋರುತ್ತಿರುವ ಮೋದಿ ಸರಕಾರ ಈ ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಕಂಟಕಪ್ರಾಯವಾಗಿದೆ ಎಂದು ಆರೋಪಿಸಿದರು.

ಮುಂಬರುವ ಲೋಕಸಭಾ ಚುನಾವಣೆ ಹಸಿದವರ ಹಾಗೂ ಉಳ್ಳವರ ನಡುವೆ ನಡೆಯಲಿರುವ ಚುನಾವಣೆ, ನಕಲಿ ದೇಶಪ್ರೇಮದ ನೆಪದಲ್ಲಿ ಈ ದೇಶದ ಪ್ರಜಾತಂತ್ರವನ್ನು ಹಾಳು ಮಾಡುವ ಬಿಜೆಪಿ ಈ ಬಾರಿ ಸಂಪೂರ್ಣ ಸೋಲಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೂಬಿನ್ ಮೊಸಸ್, ತನೂಜ್ ನಾಯ್ಡು, ಸಂತೋಷ್ ಲಕ್ಯಾ, ನಿಜಗುಣ, ರಮೇಶ್, ವಿಜಯ್‌ಕುಮಾರ್ ಇದ್ದರು.

Guarantees are not part-of-life plans