ಜೈಪುರ: ರಾಜಸ್ಥಾನ ರಾಯಲ್ಸ್‌ ತಂಡದ ಬಲಾಢ್ಯ ಬ್ಯಾಟಿಂಗ್‌ ವಿಭಾಗದ ಮೇಲೆ ರಶೀದ್‌ ಖಾನ್‌ ಹಾಗೂ ನೂರ್‌ ಅಹ್ಮದ್‌ ಜಂಟಿಯಾಗಿ ದಾಳಿ ನಡೆಸಿದ ಕಾರಣ, ಗುಜರಾತ್‌ ಟೈಟಾನ್ಸ್‌ ತಂಡ ಐಪಿಎಲ್‌ 2023ಯ ತನ್ನ 10ನೇ ಪಂದ್ಯದಲ್ಲಿ 7ನೇ ಗೆಲುವು ಕಂಡಿದೆ.

ಜೈಪುರದ ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ರಾಯಲ್ಸ್‌ ತಂಡ ನಿರೀಕ್ಷಿತ ಮಟ್ಟದಲ್ಲಿ ಬ್ಯಾಟಿಂಗ್‌ ನಿರ್ವಹಣೆ ತೋರಲು ವಿಫಲವಾಯಿತು. ನಾಯಕ ಸಂಜು ಸ್ಯಾಮ್ಸನ್‌ ಹೊರತಾಗಿ ಉಳಿದ ಯಾವುದೇ ಬ್ಯಾಟ್ಸ್‌ಮನ್‌ಗಳು 16 ರನ್‌ಗಳ ಗಡಿ ಕೂಡ ದಾಟಲಿಲ್ಲ. ಇದರಿಂದಾಗಿ ರಾಜಸ್ಥಾನ ರಾಯಲ್ಸ್‌ ತಂಡ 17.5 ಓವರ್‌ಗಳಲ್ಲಿ 118 ರನ್‌ಗೆ ಆಲೌಟ್‌ ಆಯಿತು.

119 ರನ್‌ಗಳ ಸುಲಭ ಸವಾಲನ್ನು ಲೆಕ್ಕವೇ ಇಲ್ಲದಂತೆ ಬೆನ್ನಟ್ಟಿದ ಗುಜರಾತ್‌ ಟೈಟಾನ್ಸ್‌ ತಂಡ ವೃದ್ಧಿಮಾನ್‌ ಸಾಹ (41ರನ್‌, 34 ಎಸೆತ, 5 ಬೌಂಡರಿ), ಶುಭಮನ್‌ ಗಿಲ್‌ (36ರನ್‌, 35 ಎಸೆತ, 6 ಬೌಂಡರಿ) ಹಾಗೂ ಹಾರ್ದಿಕ್‌ ಪಾಂಡ್ಯ (39ರನ್‌, 15 ಎಸೆತ, 3 ಬೌಂಡರಿ, 3 ಸಿಕ್ಸರ್‌) ಬ್ಯಾಟಿಂಗ್‌ ಮೂಲಕ ಸರಳ ರೀತಿಯಲ್ಲಿ ಗೆಲುವು ಸಾಧಿಸಿತು. ಇದರೊಂದಿಗೆ 14 ಅಂಕ ಸಂಪಾದನೆ ಮಾಡಿರುವ ಗುಜರಾತ್‌ ಟೈಟಾನ್ಸ್‌ ಪ್ಲೇ ಆಫ್‌ಗೇರುವ ಹಾದಿಯಲ್ಲಿದ್ದರೆ, ರಾಜಸ್ಥಾನ ರಾಯಲ್ಸ್‌ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ.

ಕನಿಷ್ಠ ಪಕ್ಷ ಪಂದ್ಯದಲ್ಲಿ ಹೋರಾಟ ತೋರಬೇಕಾದರೆ, ರಾಜಸ್ಥಾನ ರಾಯಲ್ಸ್‌ ತಂಡ ಆರಂಭದಲ್ಲಿಯೇ ಗುಜರಾತ್‌ನ ಕೆಲ ವಿಕೆಟ್‌ಗಳನ್ನು ಉರುಳಿಸಬೇಕಿತ್ತು. ಆದರೆ, ಗುಜರಾತ್‌ ತಂಡದ ಆರಂಭಿಕರಾದ ವೃದ್ಧಿಮಾನ್‌ ಸಾಹ ಹಾಗು ಶುಭ್‌ಮನ್‌ ಗಿಲ್‌ ಇದಕ್ಕೆ ಅವಕಾಶ ನೀಡಲಿಲ್ಲ. ಗಿಲ್‌ ಬ್ಯಾಟಿಂಗ್‌ಗೆ ಹೊಂದಿಕೊಳ್ಳಲು ಕೆಲ ಸಮಯ ತೆಗೆದುಕೊಂಡರಾದರೂ, ವೃದ್ಧಿಮಾನ್‌ ಸಾಹ ತಾವು ಎದುರಿಸಿದ ಮೊದಲ 13 ಎಸೆತಗಳಲ್ಲಿ ಐದು ಬೌಂಡರಿ ಸಿಡಿಸಿ ಅಬ್ಬರಿಸಿದ್ದರು. ಇದರಿಂದಾಗಿ 5 ಓವರ್‌ಗಳಲ್ಲಿ ಗುಜರಾತ್‌ 39 ರನ್‌ ಬಾರಿಸಿತ್ತು. ಇದರಲ್ಲಿ ಬೌಲ್ಟ್‌ ಅವರ ಮೂರು ಓವರ್‌ಗಳಲ್ಲಿಯೇ 28 ರನ್‌ ಬಾರಿಸಲಾಗಿತ್ತು. ಆದರೆ, ಗಿಲ್‌ ನಿರೀಕ್ಷೆಯಂತೆ ಬ್ಯಾಟಿಂಗ್‌ ಮಾಡುತ್ತಿರಲಿಲ್ಲ. ಅದರೆ, ಪಂದ್ಯ ಗೆಲ್ಲುವ ಭರವಸೆ ಹೊಂದಿದ್ದ ಸಾಹ ಸಲೀಸಾಗಿ ರನ್‌ಗಳನ್ನು ಬಾರಿಸಿದರು. 35 ಎಸೆತಗಳಲ್ಲಿ 36 ರನ್‌ ಬಾರಿಸಿದ್ದ ಗಿಲ್‌ 10ನೇ ಓವರ್‌ನಲ್ಲಿ ಸ್ಟಂಪ್‌ ಔಟ್‌ ಆಗಿ ನಿರ್ಗಮಿಸಿದರು.

ಆ ಮೂಲಕ ಚಾಹಲ್‌ ಐಪಿಎಲ್‌ನಲ್ಲಿ 179ನೇ ವಿಕೆಟ್‌ ಸಾಧನೆ ಮಾಡಿದರು. ಇನ್ನು ಐದು ವಿಕೆಟ್‌ ಸಾಧನೆ ಮಾಡಿದರೆ, ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್‌ ಉರುಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಡ್ವೇನ್‌ ಬ್ರಾವೋ ಸಾಧನೆಯನ್ನು ಅವರು ಮುರಿಯಲಿದ್ದಾರೆ.

ಇನ್ನು ರಾಜಸ್ಥಾನ ತಂಡದ ಬ್ಯಾಟಿಂಗ್‌ ವೇಳೆ, ಅವರ ಬ್ಯಾಟಿಂಗ್‌ಗಿಂತ ಗುಜರಾತ್‌ ತಂಡದ ಬೌಲಿಂಗ್‌ ಗಮನಸೆಳೆಯಿತು. ಆರಂಭದಲ್ಲಿ ಮೊಹಮದ್‌ ಶಮಿ ವೇಗದ ಬೌಲಿಂಗ್‌ ಮೂಲಕ ರಾಜಸ್ಥಾನವನ್ನು ಕಟ್ಟಿಹಾಕಿದರೆ, ಮಧ್ಯಮ ಓವರ್‌ಗಳಲ್ಲಿ ರಶೀದ್‌ ಹಾಗೂ ನೂರ್‌ ಅಹ್ಮದ್‌ ಸ್ಪಿನ್‌ ಬಲೆ ಬೀಸಿದರು. ಎರಡು ಆಕರ್ಷಕ ರನೌಟ್‌ ಮೂಲಕ ತಂಡದ ಫೀಲ್ಡಿಂಗ್‌ ಕೂಡ ಗಮನಸೆಳೆಯಿತು. ಈ ಎರಡೂ ರನ್ಔಟ್‌ಗಳಲ್ಲಾಗಲಿ, ಉಳಿದ 8 ವಿಕೆಟ್‌ಗಳಲ್ಲಾಗಲಿ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಾಹ ಅವರ ಸಣ್ಣ ಪಾತ್ರ ಕೂಡ ಇದ್ದಿರಲಿಲ್ಲ.

Gujarat Titans 7th win in their 10th match of IPL 2023