ಮುಂಬೈ : ಮನೆಯಲ್ಲಿ ದುಡಿಯುವ ಗೃಹಿಣಿಯರ ಶ್ರಮ “ಥ್ಯಾಂಕ್ಸ್​ ಲೆಸ್​, ಸಂಭಾವನೆ ರಹಿತ’ ದುಡಿತ. ವಾರದ ರಜೆಯೂ ಇಲ್ಲದೆ, ಸಮಯದ ಮಿತಿಯನ್ನೂ ಲೆಕ್ಕಿಸದ ಮನೆವಾಳ್ತೆ ನೋಡುವ ಗೃಹಿಣಿಯರಿಗೆ ದಕ್ಕುವುದು ಟೀಕೆ–ಟಿಪ್ಪಣಿ, ಕುಹಕದ ಮಾತು. ಇಂಥ ಕಿರಿಕಿರಿಯ ಮಧ್ಯೆಯೂ ಅವರು ತಮ್ಮ ಕಾಯಕದಲ್ಲಿ ಸುಖಿಗಳು. ಇಂಥವರಲ್ಲಿರುವ ಕೌಶಲವನ್ನು ಔದ್ಯೋಗಿಕ ಕ್ಷೇತ್ರದಲ್ಲಿ ಬಳಸಿಕೊಳ್ಳಬೇಕು ಎಂದು ಬ್ಯಾಂಕ್​ ಮತ್ತು ವಿವಿಧ ಸಂಸ್ಥೆಗಳು ಮುಂದಾಗಿವೆ.

ಮನೆವಾಳ್ತೆಯಲ್ಲಿ ಮಗ್ನರಾಗಿರುವ ಮಹಿಳೆಯರಿಗೆ ಕರೆ ಮಾಡುತ್ತಿರುವ ಎಲ್​, ಓರಿಯಲ್​ ಇಂಡಿಯಾ, ಟೈಟಾನ್​, ಅವತಾರ್​ ಸಮೂಹ, ಆ್ಯಕ್ಸಿಸ್​ ಬ್ಯಾಂಕ್​ ಇನ್ನಿತರ ಸಂಸ್ಥೆಗಳು ನೌಕರಿಗೆ ಬನ್ನಿ ಎಂದು ಆಹ್ವಾನ ನೀಡುತ್ತಿವೆ. ಗೃಹಿಣಿಯರನ್ನು ಎರಡು ವಿಧದಲ್ಲಿ ವರ್ಗೀಕರಿಸಿರುವ ಈ ಸಂಸ್ಥೆಗಳು, ವೃತ್ತಿ ಕೈಗೊಳ್ಳಬಹುದಾದಷ್ಟು ವಿದ್ಯಾರ್ಹತೆ ಇದ್ದರೂ ಇಷ್ಟಪಟ್ಟೋ ಅಥವಾ ಒತ್ತಡಕ್ಕೆ ಸಿಲುಕಿಯೋ ಗೃಹಿಣಿಯರಾಗಿಯೇ ಇರುವ ಮಹಿಳೆಯರನ್ನು “ಸ್ಟ್​ ಕರಿಯರ್​ ಹೋಮ್​ಮೇಕರ್ಸ್​’ ಎಂದು ಕರೆಯಲಾಗುತ್ತದೆ. ಮದುವೆಗೂ ಮುನ್ನ ಮತ್ತು ನಂತರದ ಕೆಲವು ವರ್ಷ ನೌಕರಿ ಮಾಡಿ ಆನಂತರ ಕೆಲಕಾಲ ವೃತ್ತಿಯಿಂದ ಬಿಡುವು (ಕರಿಯರ್​ ಬ್ರೇಕ್​) ಪಡೆದಿರುವ ಮಹಿಳೆಯರು ವೃತ್ತಿಗೆ ಮತ್ತೆ ಮರಳಲು ಬಯಸಿದರೆ ಅಂತಹವರನ್ನು “ಸೆಕೆಂಡ್​ ಕರಿಯರ್​ ಹೋಮ್​ಮೇಕರ್ಸ್​’ ಎಂದು ಗುರುತಿಸಿವೆ. ಈಗ “ಸ್ಟ್​ ಕರಿಯರ್​ ಹೋಮ್​ಮೇಕರ್ಸ್​’ಗಳತ್ತ ಈ ಸಂಸ್ಥೆಗಳು ಗಮನ ಹರಿಸಿವೆ.

ಆ್ಯಕ್ಸಿಸ್​ ಬ್ಯಾಂಕ್​ ಸೇಲ್ಸ್​, ಮಾನವ ಸಂಪನ್ಮೂಲ (ಎಚ್​ಆರ್​), ಬ್ರಾಂಚ್​ ಬ್ಯಾಂಕಿಂಗ್​ಗಳಲ್ಲಿ ಗೃಹಿಣಿಯರಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಈ ಬ್ಯಾಂಕ್​ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ರಾಜ್​ಕಮಲ್​ ವೆಂಪತಿ ಹೇಳಿದ್ದಾರೆ.

ಗೃಹಿಣಿಯರು ಮನೆಯ ಒಳಿತಿಗಾಗಿ ವಿನಿಯೋಗಿಸುವ ಸಮಯ ಮತ್ತು ಶ್ರಮವನ್ನು ಗುರುತಿಸುವುದಿಲ್ಲ. ಆದರೆ, ಅವರು ಮನೆಗೆ ಮೂಲಾಧಾರ. ಅವರಲ್ಲಿ ಹೆಚ್ಚು ತಾಳ್ಮೆ, ಕೆಲಸದಲ್ಲಿ ಶ್ರದ್ಧೆ ಇರುತ್ತದೆ. ಮನೆಯನ್ನು ನಳನಳಿಸುವಂತೆ ಇರಿಸಿಕೊಳ್ಳುವುದು, ಮನೆಯ ಬೇಕುಬೇಡದ ಮೇಲೆ ನಿಗಾ, ಖರ್ಚುವೆಚ್ಚಗಳ ಸಮತೋಲನ, ಮಕ್ಕಳ ಶಿಕ್ಷಣ ಮತ್ತು ಬೆಳವಣಿಗೆ, ಕುಟುಂಬದವರ ಆರೋಗ್ಯ, ಸಾಕು ಪ್ರಾಣಿಗಳ ಯೋಗಕ್ಷೇಮ, ಗಾರ್ಡನಿಂಗ್​ ಇಂತಹದರಲ್ಲೇ ಅವರು ಹೆಚ್ಚಿನ ಸಮಯ ಕಳೆಯುತ್ತಾರೆ. ಗೃಹಿಣಿಯರಲ್ಲಿರುವ ಮನೆಯ ನಿರ್ವಹಣೆಯಂಥ ಕುಶಲತೆಯು ಔದ್ಯೋಗಿಕ ಕ್ಷೇತ್ರದ ಆಸ್ತಿ ಆಗಬಹುದು. ಆದರೆ, ಇಂಥಹದನ್ನು ಗುರುತಿಸುವ ಮನಸ್ಥಿತಿ ಉದ್ಯೋಗದಾತರಿಗೆ ಬೇಕಾಗುತ್ತದೆ ಎಂದು ವೆಂಪತಿ ಅಭಿಪ್ರಾಯಪಡುತ್ತಾರೆ.

ಕೋವಿಡ್​ ಸಾಂಕ್ರಾಮಿಕದ ಸನ್ನಿವೇಶವು ನಮಗೆ ಗೃಹಿಣಿಯರತ್ತ ನೋಡುವಂತೆ ಮಾಡಿದೆ ಎಂದು ಟೈಟಾನ್​ನ ಎಚ್​ಆರ್​ ಮುಖ್ಯಾಧಿಕಾರಿ ಪ್ರಿಯಾ ಮತಿಲಕತ್​ ಹೇಳಿದರೆ, ಅವತಾರ್​ ಸಮೂಹದ ಅಧ್ಯಕ್ಷೆ ಸೌಂದರ್ಯಾ ರಾಜೇಶ್​; ಗೃಹಿಣಿಯರಲ್ಲಿ ಸಮಸ್ಯೆಯನ್ನು ಪರಿಹರಿಸುವ ಸ್ಕಿಲ್​ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಇಂಥ ಪ್ರಯೋಗವನ್ನು ನಾವು 2006ರಲ್ಲೇ ಆರಂಭಿಸಿದ್ದೆವು ಎಂದಿದ್ದಾರೆ.

ಇದನ್ನೂ ಓದಿ: International women’s Day 2022 : ಧೃತಿ ಮಹಿಳಾ ಮಾರುಕಟ್ಟೆಯಿಂದ : ಧೃತಿಗೆಡದ ಹೆಜ್ಜೆಗಳು: ಪುಸ್ತಕ ಬಿಡುಗಡೆ ಕಾರ್ಯಕ್ರಮ

ಇದನ್ನೂ ಓದಿ: Happy International Women’s Day 2022 : ಅಂತರರಾಷ್ಟ್ರೀಯ ಮಹಿಳಾ ದಿನ 2022 : ಅಮ್ಮ ನೀನೇ ನಮ್ಮೆಲ್ಲರ ನಾಯಕಿ!

(Homemakers get call for first office job)