ಶಿವಮೊಗ್ಗ:  ನಗರದ ಹಳೇ ಶಿವಮೊಗ್ಗ ಭಾಗದ ಸೀಗೆಹಟ್ಟಿಯ ಅಂತರಘಟ್ಟಮ್ಮ ದೇವಸ್ಥಾನ ಸಮೀಪದ ನಗರಪಾಲಿಕೆ ವತಿಯಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದ ವೇಳೆ ಗಣಪತಿ ಮತ್ತು ನಾಗ ವಿಗ್ರಹ ಪತ್ತೆಯಾದ ಘಟನೆ ನಡೆದಿದೆ. ತಕ್ಷಣವೇ ಸ್ಥಳೀಯರು ಜೆಸಿಬಿ ಕಾರ್ಯಾಚರಣೆ ಸ್ಥಗಿತಗೊಳಿಸಿ, ಸಿಕ್ಕಿದ ವಿಗ್ರಹವನ್ನು ತೊಳೆದು ಪೂಜೆ ಸಲ್ಲಿಸಿದರು. ಅಲ್ಲಿಯೇ ಭಗವಾಧ್ವಜ ನೆಟ್ಟು ಜೈಕಾರ ಘೋಷಣೆ ಮಾಡಿದರು.

ನಗರದ ಸೀಗೆಹಟ್ಟಿಯಲ್ಲಿ ಪಾಲಿಕೆಗೆ ಸೇರಿದ ಜಾಗದಲ್ಲಿ ವಾಣಿಜ್ಯ ಕಟ್ಟಡ ಕಟ್ಟುವ ಉದ್ದೇಶದಿಂದ ಸ್ಥಳದಲ್ಲಿದ್ದ ಅರಳಿಮರ ತೆರವುಗೊಳಿಸಿ ಸ್ವಚ್ಛಗೊಳಿಸುವ ಕಾರ್ಯವನ್ನು ಮಹಾನಗರ ಪಾಲಿಕೆಯಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಚರಣೆ ವೇಳೆ ಭೂಮಿಯೊಳಗೆ ಗಣೇಶ ಮತ್ತು ನಾಗವಿಗ್ರಹ ಪತ್ತೆಯಾಯಿತು. ತಕ್ಷಣವೇ ಸ್ಥಳೀರು ಕಾರ್ಯಾಚರಣೆ ನಿಲ್ಲಿಸುವಂತೆ ಆಗ್ರಹಿಸಿದರು. ಇಲ್ಲಿ ದೇವಾಲಯವಿತ್ತು ಎಂಬುದಕ್ಕೆ ಇದು ಸೂಚನೆ. ಭೂಮಿಯ ಕೆಳಗೆ ಇನ್ನಷ್ಟುಪುರಾವೆಗಳು ಸಿಗಬಹುದು. ಹೀಗಾಗಿ ಇಲ್ಲಿ ವಾಣಿಜ್ಯ ಕಟ್ಟಡ ಕಟ್ಟಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಲ್ಲಿ ಗಣಪತಿ ಹಾಗೂ ನಾಗದೇವರ ವಿಗ್ರಹ ದೊರಕಿದ್ದರಿಂದ ದೇವಾಲಯ ಕಟ್ಟಬೇಕು ಎಂದು ಒತ್ತಾಯಿಸಿದರು. ಭಗವಾಧ್ವಜ ನೆಟ್ಟು ಸ್ಥಳೀಯರು ಪೂಜೆ ಕೂಡ ಸಲ್ಲಿಸಿದರು. ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಮೇಯರ್‌ ಎಸ್‌.ಕೆ. ಮರಿಯಪ್ಪ ಸ್ಥಳಕ್ಕೆ ಭೇಟಿ ನೀಡಿದರು. ಜೊತೆಗೆ ಆಡಳಿತ ಪಕ್ಷದ ನಾಯಕ ಎಸ್‌.ಎನ್‌. ಚನ್ನಬಸಪ್ಪ ಕೂಡ ಭೇಟಿ ನೀಡಿದರು. ಸ್ಥಳೀಯರ ಒತ್ತಾಯದ ಮೇರೆಗೆ ಜೆಸಿಬಿಯಿಂದ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ವಿಗ್ರಹ ದೊರೆತಿರುವ ಸ್ಥಳದಲ್ಲಿ ಕಾಟನ್‌ ರಿಬ್ಬನ್‌ ಹಾಕಿ ವಿಗ್ರಹವನ್ನು ಸಂರಕ್ಷಿಸಲಾಗಿದೆ.

Idols of Lord Ganapathi Lord Naga found: