ಕಲಬುರಗಿ: ಕರ್ನಾಟಕ ವಿಧಾನಸಭೆ ಚುನಾವಣೆ ರಂಗೇರಿದ್ದು, ಕಲಬುರಗಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 1.90 ಕೋಟಿ ರೂ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಹೌದು.. ಕರ್ನಾಟಕ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ಚುನಾವಣಾ ಆಯೋಗ ವೇಳಾಪಟ್ಟಿ ಘೋಷಣೆ ಮಾಡುವ ಮೊದಲೇ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ಮಗ್ನವಾಗಿವೆ.

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಚೆಕ್ ಪೋಸ್ಟ್ ಗಳಲ್ಲಿ ಬುಧವಾರ ಯಾವುದೇ ದಾಖಲೆ ಇಲ್ಲದ ಅಂದಾಜು ₹ 1.90 ಕೋಟಿ ಹಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ.‌ ಗುರುಕರ್ ತಿಳಿಸಿದ್ದಾರೆ.

ಇದರಲ್ಲಿ ಕಮಲಾಪುರ ತಾಲ್ಲೂಕಿನ ಕಿಣ್ಣಿಸಡಕ್ ಚೆಕ್ ಪೋಸ್ಟ್ ಬಳಿ 1.40 ಕೋಟಿ ರೂ ಹಾಗೂ ಜೇವರ್ಗಿ ಚೆಕ್ ಪೋಸ್ಟ್ ನಲ್ಲಿ 50 ಲಕ್ಷ ರೂ ಹಣವನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆಯಲಾದ ಹಣವನ್ನು ಅಧಿಕಾರಿಗಳು ಲೆಕ್ಕ‌ ಮಾಡುವಲ್ಲಿ ನಿರತವಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

Illegal seizure of Rs 1.90 crore in Kalaburagi