“ಮಣ್ಣಿಂದ ಕಾಯ, ಮಣ್ಣಂದ ಜೀವ, ಮಣ್ಣು ಬಿಟ್ಟವರಿಗೆ ಆಧಾರವಿಲ್ಲ” ಎಂಬ ಪುರಂದರ ದಾಸರ ಪದಗಳು ಮನುಷ್ಯ ಮತ್ತು ಮಣ್ಣಿನ ಸಂಬಂಧವನ್ನು ಬಿಂಬಿಸುತ್ತದೆ. ಶೇಕಡ 95 ರಷ್ಟು ಅಹಾರ ಮಣ್ಣಿನಿಂದಲೇ ದೂರಕುವುದು. ಜಗತ್ತಿನಾದ್ಯಂತ ಹೆಚ್ಚಾದ ಜನ ಸಂಖ್ಯೆಗೆ ಅಹಾರ ಪೂರೈಕೆಗೆ ಮುಂದಾದ ಆಡಳಿತ ವ್ಯವಸ್ಥೆ ಮಣ್ಣಿನ ಸಂರಕ್ಷಣೆಯ ಬಗ್ಗೆ ಯೋಚಿಸಲೇ ಇಲ್ಲ.

ಭಾರತದಲ್ಲಿ ಹಸಿರು ಕ್ರಾಂತಿಯ ಪರಿಣಾಮ ರಾಸಾಯನಿಕ ಗೊಬ್ಬರ ಮತ್ತು ಔಷದಗಳು, ಸ್ವಚ್ಛ ಬೇಸಾಯಕ್ಕಾಗಿ ಕಳೆನಾಶಕಗಳ ಬಳಕೆಯಿಂದ ಆಳವಾಗಿ ಬೇರು ಬಿಡುವ ಸಸ್ಯಗಳ ನಾಶ ಮಾಡುತ್ತಿರುವುದು. ಬೃಹತ್ ಗಾತ್ರದ ಯಂತ್ರಗಳಿಂದ ಉಳುಮೆ ಮಾಡುವುದು. ಅತಿಯಾಗಿ ನೀರಿನ ಬಳಕೆ ಮಾಡಿಕೊಳ್ಳುತ್ತಿರುವುದರಿಂದ. ಮಣ್ಣು ರೋಗಗ್ರಸ್ಥಗೊಂಡಿದೆ.

ಭೂಮಿಯ ಮೇಲೆ ಒಂದು ಇಂಚು ಮಣ್ಣು ರೂಪಗೊಳ್ಳಲು 500 ವರ್ಷ ಬೇಕಾಗುತ್ತದೆ. ಆದರೆ ಇದೇ ಮಣ್ಣನ್ನು ಸಂರಕ್ಷಣೆ ಮಾಡಬೇಕಾದ ಕೃಷಿ ವಲಯ ಆಧುನಿಕ ಕೃಷಿ ಹೆಸರಲ್ಲಿ ಪಂಚಭೂತಗಳ ಜೊತೆ ಅನುಚಿತವಾಗಿ ವರ್ತಿಸುತ್ತಿದೆ. ಇದರಿಂದಾಗಿ ಮಣ್ಣಿನ ಆರೋಗ್ಯ ಪ್ರಸ್ತುತ ಶೇಕಡ 35 ರಷ್ಟು ಆಳಾಗಿದೆ. ಇನ್ನು ಇದೇ ರೀತಿ ರಾಸಾಯನಿಕ ಕೃಷಿ ಪದ್ಧತಿಯಲ್ಲೇ ಮುಂದುವರೆದರೆ ಪೂರ್ಣ ಆಳಾಗುವುದಂತು ಸತ್ಯ.

ಭೂಮಿಯ ಮೇಲ್ಪದರಿನ 4 ಇಂಚು ಮಣ್ಣು ಅತ್ಯಂತ ಫಲವತ್ತತೆಯಿಂದ ಕೂಡಿರುತ್ತದೆ. ಸಸ್ಯಗಳಿಗೆ ಸರಬರಾಜು ಮಾಡುವ ಬೇರುಗಳು ಈ ನಾಲ್ಕು ಇಂಚಿನ ಮಣ್ಣನ್ನೇ ಅವಲಂಬಿಸಿರುತ್ತವೆ. ಜೊತೆಗೆ ಮಣ್ಣು ಜೀವಿಗಳು ಮತ್ತು ಸೂಕ್ಷ್ಮಾಣು ಜೀವಿಗಳ ವಾಸ ಸ್ಥಾನವು ಇದೇ ಮಣ್ಣಾಗಿರುತ್ತದೆ. ಪಂಚಭೂತಗಳ ನಿಯಂತ್ರಕ ಶಕ್ತಿಯಾದ ಸಾವಯವ ಇಂಗಾಲವು ಈ ನಾಲ್ಕು ಇಂಚಿನ ಮಣ್ಣಿನಲ್ಲಿ ಸೃಷ್ಟಿಯಾಗಿರುತ್ತದೆ. ಇಂತಹ ಮಣ್ಣನ್ನು ಸಂರಕ್ಷಿಸುವ ಯೋಜನೆಗಳು ಆಧುನಿಕ ಕೃಷಿಯಲ್ಲಿ ಇಲ್ಲ ಎಂದಾದ ಮೇಲೆ ಇಂತಹ ಕೃಷಿಯ ಅವಲಂಬನೆ ಏಕೆ?

ನೈಸರ್ಗಿಕ ಕೃಷಿಯಲ್ಲಿ ಇದಕ್ಕೆ ಪರಿಹಾರವಿದೆ. ಕಳೆದ ನೂರಾರು ವರ್ಷಗಳ ಹಿಂದೆ ಕೃಷಿ ವಿಜ್ಞಾನಿಗಳು ಯಾರು ಇರಲಿಲ್ಲ ಆಗ ನಮ್ಮ ರೈತರು ಸುಸ್ಥಿರ ಕೃಷಿ ಮಾಡಿಕೊಂಡು ಬಂದಿಲಿಲ್ಲವೇ?
ಆಗ ಕೃಷಿ ಮಣ್ಣು ಆರೋಗ್ಯವಾಗಿ ಇತ್ತು. ಆಗ ಕೃಷಿ ಮಣ್ಣಿನಲ್ಲಿ ಜೀವ ವೈವಿಧ್ಯತೆ ಇತ್ತು. ನೀರಿನ ಸದ್ಬಳಕೆ ಇತ್ತು. ಸಾವಯವ ಇಂಗಾಲ ಸಂವೃದ್ದಿಯಾಗಿತ್ತು. ಋತುಮಾನಗಳಿಗೆ ಅನುಗುಣವಾದ ಬೆಳೆ ಸಂಯೋಜನೆ ಇತ್ತು. ಈ ನೈಜತೆಯ ಬದಲಿಗೆ ಕೃತಕತೆ ಆಧುನಿಕ ಕೃಷಿಯ ಹೆಸರಲ್ಲಿ ಪರಿಚಿತಗೊಂಡ ಮೇಲೆ ಕೃಷಿ ಬಿಕ್ಕಟ್ಟುಗಳು ಸೃಷ್ಟಿಯಾದವು.

ಚಂದ್ರಶೇಖರ ನಾರಣಾಪುರ.
ಕೃಷಿ ನಿವಾಸ.
ಚಿಕ್ಕಮಗಳೂರು.

mob: 9902078988

Impact of modern agriculture Agricultural crises begin