ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಶ್ರೇಯಸ್ ಅಯ್ಯರ್ ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಆ ಮೂಲಕ ಮೊದಲ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯದಲ್ಲೇ ಶತಕ ಸಿಡಿಸಿದ ಆಟಗಾರರ ಸಾಲಿಗೆ ಸೇರಿದ್ದಾರೆ.

ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಸೇರಿದಂತೆ ಒಟ್ಟು 15 ಮಂದಿ ಆಟಗಾರರು ಈ ಹಿಂದೆಯೇ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

ಮೊದಲ ದಿನದಾಟದ ಅಂತ್ಯಕ್ಕೆ 75 ರನ್ ಗಳಿಸಿ ಆಡುತ್ತಿದ್ದ ಶ್ರೇಯಸ್ ಅಯ್ಯರ್ ಎರಡನೇ ದಿನ ಆಟ ಚುರುಕುಗೊಳಿಸಿದರು. ಅವರ ಜತೆ ಅರ್ಧ ಶತಕ ಗಳಿಸಿ ಆಡುತ್ತಿದ್ದ ರವೀಂದ್ರ ಜಡೇಜಾ ಎರಡನೇ ದಿನದಾಟದ ಮೊದಲ ಸ್ಪೆಲ್‌ನಲ್ಲೇ ಸೌಥಿ ಅವರಿಗೆ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ: IND vs NZ Test: ಭಾರತಕ್ಕೆ ಉತ್ತಮ ಆರಂಭ, ದಿನದಾಟದ ಅಂತ್ಯಕ್ಕೆ 258/4

171 ಎಸೆತ ಎದುರಿಸಿದ ಅಯ್ಯರ್ 105 ರನ್ ಗಳಿಸಿ ಸೌಥಿ ಅವರಿಗೆ ವಿಕೆಟ್ ಒಪ್ಪಿಸಿದರು. ಇದರಲ್ಲಿ 13 ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದ್ದವು.

ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 345 ರನ್ ಗಳಿಸಿ ಆಲೌಟ್ ಆಗಿದೆ. ಅಯ್ಯರ್ ಹೊರತುಪಡಿಸಿ ಭಾರತ ಪರ ರವೀಂದ್ರ ಜಡೇಜಾ (50), ಶುಭಮನ್ ಗಿಲ್ (52) ಹಾಗೂ ಆರ್‌.ಅಶ್ವಿನ್ (38) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ನ್ಯೂಜಿಲೆಂಡ್ ಪರ ಸೌಥಿ 5, ಜೆಮಿಸನ್ 3, ಅಜಾಜ್ ಪಟೇಲ್ 2 ವಿಕೆಟ್ ಕಬಳಿಸಿದ್ದಾರೆ.