ಉಕ್ರೇನ್ ನಲ್ಲಿ ಯುದ್ಧ ನಡೆಯುತ್ತಿರುವುದರ ಮಧ್ಯೆ ತನ್ನ 20,000 ಕ್ಕೂ ಹೆಚ್ಚು ಪ್ರಜೆಗಳನ್ನು ಸುರಕ್ಷಿತವಾಗಿ ಮರಳಿ ಕರೆತರುವಲ್ಲಿ ಯಶಸ್ವಿಯಾಗಿರುವ ಭಾರತ, ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಸುಮಿ ನಗರದಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತ ಕಾರಿಡಾರ್ ಮೂಲಕ ಕರೆತರಲು ಸಾಧ್ಯವಾಗಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಕಳವಳ ವ್ಯಕ್ತಪಡಿಸಿದೆ.

ಉಕ್ರೇನ್-ರಷ್ಯಾ ಯುದ್ಧವನ್ನು ತಕ್ಷಣ ನಿಲ್ಲುಸುವಂತೆ ಕರೆ ನೀಡುವ ತನ್ನ ನಿರ್ಧಾರದಲ್ಲಿ ಭಾರತ ಅಚಲವಾಗಿದೆ ಎಂದು  ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ ಎಸ್ ತಿರುಮೂರ್ತಿ ಹೇಳಿದ್ದಾರೆ.

ಉಕ್ರೇನ್ ನಲ್ಲಿ ಬಾಕಿ ಉಳಿದಿರುವ ಭಾರತೀಯ ಪ್ರಜೆಗಳು ಸೇರಿದಂತೆ ವಿಶ್ವದ ಬೇರೆ ಬೇರೆ ಕಡೆಗಳಲ್ಲಿರುವ ನಾಗರಿಕರ ಸುರಕ್ಷಿತ ವಾಪಸಾತಿಗೆ ರಷ್ಯಾಮತ್ತು ಉಕ್ರೇನ್ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಭಾರತ ಪುನರುಚ್ಛರಿಸಿದೆ. ಎರಡೂ ದೇಶಗಳಿಗೆ ಮನವಿ ಮಾಡಿಕೊಂಡರೂ ಸಹ ಸುಮಿ ನಗರದಲ್ಲಿ ಸಿಲುಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಕಾರಿಡಾರ್  ಸಾಧ್ಯವಾಗಿಲ್ಲ ಎಂದು  ಹೇಳಿದ್ದಾರೆ.

ಇದುವರೆಗೆ 20 ಸಾವಿರಕ್ಕೂ ಅಧಿಕ ಭಾರತೀಯರನ್ನು ಕರೆತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಬೇರೆ ದೇಶಗಳಿಗೆ ಸಹ ನಾವು ಸಹಾಯ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕೂಡ ನಮ್ಮ ದೇಶದ ನಾಗರಿಕರು ಸೇರಿದಂತೆ ಬೇರೆ ದೇಶಗಳ ನಾಗರಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಭಾರತ ಮುಕ್ತವಾಗಿದೆ ಎಂದರು.

Indian Students