ಹೊಸಪೇಟೆ:  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಭವಿಷ್ಯದ ಸಿಎಂ ಎಂದು ಕೆಲ ಶಾಸಕರು ಹೇಳಿದರೆ ಅದರಲ್ಲಿ ಏನೂ ತಪ್ಪಿಲ್ಲ. ನನಗೂ ಕೆಲವರು ಮುಂದಿನ ಸಿಎಂ ಎಂದು ಹೇಳುತ್ತಾರೆ. ಬೆಂಬಲಿಗರ ಆಶಯಕ್ಕೆ ನಾವು ತಡೆಯೊಡ್ಡಲು ಆಗುತ್ತದೆಯೇ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ.ಪರಮೇಶ್ವರ್‌ ಪ್ರಶ್ನಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ನಾಯಕರು. ಹೀಗಾಗಿ ಸಹಜವಾಗಿ ಶಾಸಕರು ಭವಿಷ್ಯದ ಸಿಎಂ ಎಂದು ಹೇಳುತ್ತಾರೆ. ಕೆಲವರಿಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕು ಎಂದಿರುತ್ತೆ. ನನ್ನ ಹೆಸರನ್ನೂ ಕೆಲವರು ಹೇಳುತ್ತಾರೆ. ಇದು ಅವರ ಬಯಕೆ, ಅದಕ್ಕೆ ನಾವು ಕಡಿವಾಣ ಹಾಕಲು ಬರುವುದಿಲ್ಲ ಎಂದರು. ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ ಸಿಎಂ ಆಗಬೇಕೆಂಬ ವಿಷಯದಲ್ಲಿ ಯಾರೂ ಮೌನವಾಗಿಲ್ಲ. ಸಂದರ್ಭ ಬಂದಾಗ ನಿರ್ಧಾರವಾಗುತ್ತದೆ ಎಂದರು.

ಕಾಂಗ್ರೆಸ್‌ನಲ್ಲಿ ಚುನಾವಣೆ ನಂತರ ಶಾಸಕಾಂಗ ಪಕ್ಷದ ಸಭೆ ಕರೆದು, ಶಾಸಕರ ಅಭಿಪ್ರಾಯ ಪಡೆದು ಒಮ್ಮತದಿಂದ ಸಿಎಂ ಆಯ್ಕೆ ಮಾಡುತ್ತಾರೆ. ಇದು ನಮ್ಮ ಪದ್ಧತಿ. ಬಿಜೆಪಿಯವರನ್ನು ಮೆಚ್ಚಿಸಲು ತೀರ್ಮಾನ ಕೈಗೊಳ್ಳುವುದಿಲ್ಲ ಎಂದರು. ಶಾಸಕರನ್ನು ಗೆಲ್ಲಿಸಿ ಅಂದ್ರೆ ತಪ್ಪೇನು?: ಮಾಜಿ ಸಿಎಂ ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ನಾಯಕರು. ಒಂದು ಕ್ಷೇತ್ರದ ಪ್ರಚಾರಕ್ಕೆ ಹೋದಾಗ ಕಾಂಗ್ರೆಸ್‌ ಗೆಲ್ಲಿಸಿ, ನಮ್ಮ ಹಾಲಿ ಶಾಸಕರನ್ನು ಗೆಲ್ಲಿಸಿ ಎಂದು ಹೇಳಿದರೆ ತಪ್ಪೇನೂ ಇಲ್ಲ. ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಅವರಿಗೆ ಮತ್ತೆ ಟಿಕೆಟ್‌ ಕೊಡುವ ಸೂಚನೆಗಳಿವೆ.

ಹೀಗಾಗಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಹಾಗೇ ಹೇಳಿರಬಹುದು. ನಾನೂ ಒಬ್ಬ ಶಾಸಕನ ಕ್ಷೇತ್ರಕ್ಕೆ ಹೋದರೆ ಅವರನ್ನು ಗೆಲ್ಲಿಸಿ ಎಂದು ಹೇಳಿದರೆ ತಪ್ಪೇನಿಲ್ಲ ಎಂದರು. ವಿಜಯನಗರ ಕ್ಷೇತ್ರದಲ್ಲೂ ಸಮರ್ಥರಿಗೆ ಟಿಕೆಟ್‌ ನೀಡಲಾಗುವುದು. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲ ಮಾನದಂಡ ಪರಿಗಣಿಸಿ ಟಿಕೆಟ್‌ ಅಂತಿಮಗೊಳಿಸಲಾಗುವುದು ಎಂದರು.

It would not be wrong if some say that Sidhu is the future CM.