‘ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇ

ಬಾಯಾರಿತು ಎಂದು ಬಾವಿ ನೀರಿಗೆ ಹೋದೆ
ಬಾವಿ ಜಲ ಬತ್ತಿ ಬರಿದಾಯ್ತೋ ಹರಿಯೇ’

ನೀಲ ಮೇಲಣ ಗುಳ್ಳೇ ಹೇಗೆ ನಿಜವಲ್ಲವೋ ಹಾಗೆಯೇ ಈ ಸಂಸಾರವೆಂಬ ನಿಡಿದಾದ ಸಾಗರದಲ್ಲಿ ಯಾರಿಗೆ ಯಾರೂ ಆಗಿ ಬರರು. ನಮ್ಮ ನಿಜವಾದ ಸಹಚರ ಎಂದರೆ, ನಮ್ಮೊಳಗಿನ ಆತ್ಮವಿಶ್ವಾಸ ಮತ್ತು ಪರಮ ನಂಬಿಕೆಯ ಶ್ವಾಸ ಎನ್ನುವುದನ್ನು ನಮ್ಮ ಕನಕದಾಸರು ಅದೆಷ್ಟು ಮನೋಜ್ಞವಾಗಿ ಮುಟ್ಟಿಸಿದ್ದಾರೆ! ಈ ಕೀರ್ತನೆಯನ್ನು ಮನನ ಮಾಡಿಕೊಂಡಷ್ಟೂ ಹೊಸ ಹೊಸ ಅರ್ಥ ಬಾಹುಳ್ಯಗಳು ಮನದ ಮುಂದೆ ತೆರೆ ತೆರೆದು ತೆರೆಯುತ್ತಾ ಸಾಗುತ್ತದೆ. ಅದರಲ್ಲೂ ಕರೋನಾ ಅವಧಿಯ ಕಾಲಘಟ್ಟದ ಭಯಂಕರತೆಯ ಸಾಗರದಲ್ಲಿ ಮಿಂದೆದ್ದವರಿಗಂತೂ ‘ಯಾರಿಗೆ ಯಾರಿಲ್ಲ, ಎಲ್ಲರಿಗೂ ನಾನಾಗಬೇಕು’ ಎನ್ನುವ ಅಕ್ಷರಕ್ಷರದ ಪ್ರತ್ಯಕ್ಷ ದರ್ಶನವೇ. ಇದೇ ಹೊತ್ತಿನಲ್ಲಿ ‘ತಲ್ಲಣಿಸಿದಿರು ಕಂಡ್ಯ, ತಾಳು ಮನವೇ! ಎಲ್ಲರನೂ ಸಲಹುವನು ಇದಕೆ ಸಂಶಯವಿಲ್ಲ!’ ಎಂಬ ಭರವಸೆಯ ನುಡಿಗಳಿಂದ ಜೀವನಪ್ರೀತಿಯನ್ನು ತುಂಬಿಕೊಟ್ಟಿದ್ದೂ ಇದೇ ವಾಣಿ!

ಈ ರೀತಿಯ ಪರಮ ಸತ್ಯಗಳನ್ನು ಜಗದ ಮುಂದೆ ತೆರೆದಿಟ್ಟ ದಾರ್ಶನಿಕ ಸಂತ, ಕವಿ, ನಮ್ಮ ಕನಕದಾಸರು. ಶ್ರೇಷ್ಟ ಕಲಿಯಾಗಿ ಅನೇಕ ಯುದ್ದಗಳಲ್ಲಿ ನೇರವಾಗಿ ಬಾಗವಹಿಸಿದ್ದ ಕನಕನಾಯಕರು ಕನಕದಾಸರಾಗಿ ರೂಪುಗೊಂಡ ಪರಿಯೇ ವಿಶಿಷ್ಟ. ಈ ಕಾರಣವಾಗಿ ನಮ್ಮ ಕನ್ನಡ ಸಾಹಿತ್ಯ ಸರಸ್ವತಿಯ ಸಿರಿಮುಡಿಯ ಕಿರೀಟದಲ್ಲಿ ಮತ್ತೊಂದು ಅಮೂಲ್ಯ ರತ್ನ ರಾರಾಜಿಸುವಂತಾಯಿತು.

ಕನಕರ ಬಾಲ್ಯ, ಬೆಳವಣಿಗೆ, ಯೌವನದ ಜೀವನಕ್ಕೂ ನಂತರ ಅವರು ಹಿಡಿದ ಪಾರಮಾರ್ಥಿಕ ಹಾದಿಗೂ ಅದೆಷ್ಟು ಭಿನ್ನತೆ! ಈಗ ಲಭ್ಯವಿರುವ ಮಾಹಿತಿಗಳ ಪರಿಶೀಲನೆಯಲ್ಲಿ ಹೇಳುವುದಾದರೆ, ಕನಕರ ತಂದೆ, ಬಾಡದ ದಳಪತಿ ಬೀರಪ್ಪನಾಯಕ, ತಾಯಿ ಬಚ್ಚಮ್ಮ. ಮೋಹನ ತರಂಗಿಣಿಯಲ್ಲಿ ಬರುವ ಅನಿರುದ್ದನ ಜನನ ಸಂದರ್ಭದ ಪದ್ಯದ ಜಾಡು ಹಿಡಿದು ಕ್ರಿ. ಶ. 1495 ಜನನ ವರ್ಷ ಇರಬಹುದೆಂಬ ಊಹೆಯನ್ನು ವಿದ್ವಾಂಸರು ಮಾಡಿದ್ದಾರೆ. ತಿರುಪತಿ ತಿಮ್ಮಪ್ಪನ ಆಶೀರ್ವಾದದಿಂದ ಹುಟ್ಟಿದ ಮಗನೆಂಬ ಪ್ರೀತಿಯಿಂದ ತಿಮ್ಮಪ್ಪನೆಂದು ಕರೆದರೆಂಬ ಮಾತುಗಳು ಇವೆ, ಆದರೆ ಕನಕದಾಸರ ಅನೇಕ ಕೀರ್ತನೆಗಳಲ್ಲಿ ‘ಕನಕ’ ಎನ್ನುವ ಹೆಸರು ಮಾತ್ರ ಲಭ್ಯವಾಗುವ ಕಾರಣದಿಂದ ‘ಕನಕನಾಯಕ’ ಎಂಬುದೇ ಹುಟ್ಟಿದ ಹೆಸರಾಗಿರುವ ಅವಕಾಶವಿದೆ. ಬೀರಪ್ಪ ನಾಯಕರ ಏಕೈಕ ಪುತ್ರನಿಗೆ ಕ್ಷತ್ರಿಯೋಚಿತ ವಿದ್ಯಾಕಲಿಕೆಯ ಜೊತೆಗೆ ಕಲೆ ಸಾಹಿತ್ಯ, ಕುದುರೆ ಸವಾರಿ, ಕತ್ತಿವರಸೆ, ಕುಸ್ತಿಗಳಂತೆ ತರ್ಕ, ವ್ಯಾಕರಣ, ಮೀಮಾಂಸೆ ಮುಂತಾದ ವಿದ್ಯೆಗಳೂ ಕರತಲಾಮಲಕವಾಯಿತು.

‘ಯಾತಕೆ ದಯ ಮಾಡಲೊಲ್ಲೆ ರಂಗಯ್ಯ’ ಎನ್ನುವ ಕೀರ್ತನೆಯಲ್ಲಿ,

‘ಚಿಕ್ಕಂದು ಮೊದಲೆ ನಾನು ರಂಗಯ್ಯ-ನೀನೆ
ದಿಕ್ಕೆಂದು ನಂಬಿದೆನೊ ರಂಗಯ್ಯ’

ಎನ್ನುವ ಚರಣ ಕನಕರಿಗೆ ಸೃಜನಶೀಲ ಶಕ್ತಿ ಬಾಲ್ಯದಿಂದಲೇ ಜೊತೆಜೊತೆಯಾಗಿತ್ತೆಂಬುದಕ್ಕೆ ಹಿಡಿದ ಕೈಗನ್ನಡಿ. ‘ಕನಕ’ ಹತ್ತು ವರ್ಷ ತಂದೆಯ ಪ್ರೀತಿ ವಾತ್ಸಲ್ಯದ ಅಕ್ಕರೆಯಲ್ಲಿ ಮಿಂದಿರಬಹುದು ಅಷ್ಟೇ. ಅಷ್ಟರಲ್ಲಿ ಅವರ ವಿಯೋಗ ದುಃಖವನ್ನು ಅನುಭವಿಸಬೇಕಾಯಿತು. ಮುಂದಿನದೆಲ್ಲ ಹೋರಾಟದ ಬದುಕೇ. ಆಗಲೇ ದಾಯಾದಿ ಮಾತ್ಸರ್ಯಕ್ಕೆ ಬಲಿಯಾಗ ಬೇಕಾಯಿತು. ದಾಯಾದಿಗಳ ಚಾಡಿ ಮಾತು ನಂಬಿದ ವಿಜಯನಗರದ ದೊರೆ ಸಾಳುವ ನರಸಿಂಹನ ಮಗ ಇಮ್ಮಡಿ ನರಸಿಂಹನು ನಾಡಗೌಡಿಕೆಯನ್ನು ಕನಕನ ದಾಯಾದಿಗಳಿಗೇ ವಹಿಸಿಕೊಟ್ಟನು. ಗಂಡನ ಜೊತೆಗೆ ಅಧಿಕಾರವನ್ನೂ ಕಳೆದುಕೊಂಡ ತಾಯಿ ಬಚ್ಚಮ್ಮ ಪುಟ್ಟ ಮಗ ಕನಕನ ಜೊತೆಗೆ ತನ್ನ ತವರು ಕಾಗಿನೆಲೆಗೆ ಬಂದಾಗ ಕನಕ ಜೀವನದ ಮತ್ತೊಂದು ಮಜಲು ಆರಂಭವಾಯಿತು.

ರಾಜಕುಮರನಂತೆ ಬೆಳೆದ ಮಗುವಿಗೆ ಈಗಿನ ಹಂಗಿನ ಬದುಕು ತೀವ್ರತರ ಸಂತಾಪವನ್ನು ನೀಡಿದರೂ, ಸಂಕಟವನ್ನೂ ಸಂತಸವಾಗಿ ಪರಿವರ್ತಿಸಿಕೊಳ್ಳುವ ವರ ಅವರಿಗೆ ಜನ್ಮಜಾತವೇ. ದನಕುರಿಗಳ ಕಾವಲಿನಲ್ಲಿ, ಊರೊಟ್ಟಿನ ಕಾರ್ಯಗಳಲ್ಲಿ ತಾನೂ ಒಬ್ಬನಾಗಿ ದುಡಿದು ಊರಿನ ಉತ್ಸಾಹ ಯುವಕ ಪಡೆಗೆ ಹಾಡು, ಗಾಯನ, ಕೀರ್ತನೆ, ಯಕ್ಷಗಾನ, ನಾಟಕಗಳನ್ನು ಕಲಿಸಿ ಹಾಡಿಸಿ, ಆಡಿಸಿ ಜನಪ್ರಿಯತೆಯನ್ನು ಪಡೆಯತೊಡಗಿದ್ದ. 14-15 ವರ್ಷದ ವಯೋಮಾನದ ಈ ಕಿಶೋರನ ಕೀರ್ತಿ ಅದಾಗ ತಾನೇ ವಿಜಯನಗರದ ಅಧಿಕಾರ ಗದ್ದುಗೆ ಹಿಡಿದ ಕೃಷ್ಣದೇವರಾಯರನ್ನು ಮುಟ್ಟುವುದು ತಡವಾಗಲಿಲ್ಲ.

ವಿಜಯನಗರ –ಗೋವಾ ಹೆದ್ದಾರಿಯ ಸೂಕ್ಷ್ಮ ಆಯಕಟ್ಟಿನ ಸ್ಥಳ ಬಾಡ ಬಂಕಾಪುರಕ್ಕೆ ಕನಕನೇ ತಕ್ಕ ದಂಡನಾಯಕನೆಂದು ಕನಕ ಕಳೆದುಕೊಂಡಿದ್ದ ಪಟ್ಟಕ್ಕೆ ಮತ್ತೇ ಕೂರಿಸಿದಾಗ ಬಚ್ಚಮ್ಮ ತಾಯಿಯ ಹೆಮ್ಮೆಯ ಭಾವವನ್ನು ವರ್ಣಿಸಲೇ ಸಾಧ್ಯವಿಲ್ಲ.

ಹತ್ತು ವರ್ಷದ ಮಗನ ಕೈತಪ್ಪಿ ಹೋಗಿದ್ದ ಅಧಿಕಾರ ಹದಿನೈದನೇ ವರ್ಷಕ್ಕೇ ಮತ್ತೇ ಅವನ ಹೆಗಲೇರಿದಾಗ ಐದು ವರ್ಷಗಳ ಬನ್ನಬವಣೆಗಳನ್ನು ಕಾಗಿನೆಲೆಯ ಆದಿಕೇಶವನ ಪಾದಕ್ಕೇ ಸಮರ್ಪಿಸಿದ ತಾಯಿ ಮಕ್ಕಳು ಆದಿಕೇಶವನ ಪ್ರೀತಿ ವಾತ್ಸಲ್ಯಗಳ ಜೇನನ್ನು ಎದೆಯ ಬಟ್ಟಲಲ್ಲಿ ತುಂಬಿಕೊಂಡು ಬಾಡಕ್ಕೆ ಬಂದು ಬಂಕಾಪುರದ ದಂಡನಾಯಕತ್ವದ ಹೊಣೆ ವಹಿಸಿಕೊಂಡರು.

ಕನಕನಾಯಕರ ಬದುಕಿನ ಮೂರನೇ ಅಧ್ಯಾಯ ಈಗ ಆರಂಭವಾಯಿತು. ಹದಿನೈದರ ವಯಸ್ಸಿಗೇ ಇಪ್ಪತ್ತೈದರ ಹುಮ್ಮಸ್ಸು, ಉತ್ಸಾಹ, ಶೌರ್ಯ, ಸಾಹಸಗಳು ಅವರನ್ನು ಅಪರಿಮಿತ ಸಾಧನೆಯ ಗಣಿಯಾಗಿಸಿದ್ದುವು.

‘ಕನಕದಳದಲಿ ಬಂದು ಕಲೆತೆನೆಂದರೆ
ಫೌಜು ಕನಕು ಮನಕಾಗುವುದು ಹರಿಯೇ|’

ಕನಕನ ಈ ಯಶೋಗಾಥೆ ದಾಯಾದಿಗಳ ಎದೆಯಲ್ಲಿ ದಳ್ಳುರಿಯನ್ನು ಧಗದಗಿಸುವಂತೆ ಮತ್ತು ತಾಯಿಯ ಎದೆಮುಗುಳು ದಳಗೆದರಿ ಘಮ ಘಮಿಸುವಂತೆ ಮಾಡಿತು. ತಾಯಿಯ ಎದೆಯಲ್ಲಿ ಮಗನಿಗೆ ಮದುವೆ ಮಾಡಿ ಮೊಮ್ಮಗುವನ್ನು ಎತ್ತಿ ಆಡಿಸುವ ತವಕ ತೀಡಿತು. ತಾಯಿಯ ಬಯಕೆಗೆ ಮಗನ ಒಪ್ಪಿಗೆ ದೊರೆತಾಗ ಶಿಗ್ಗಾಂವಿಯ ಲಕ್ಷ್ಮೀದೇವಿ ಕನಕನ ಮನಮನಗಳನ್ನು ತುಂಬಿ ಬಂದಳು.

ಕೃಷ್ಣದೇವರಾಯರ ವೈಭವದ ಆಡಳಿತಕ್ಕೆ, ವಿಜಯೋತ್ಸವಗಳಿಗೆ ತಮ್ಮದೂ ಪಾಲು ನೀಡುತ್ತಾ ಬಂದ ಕನಕದಾಸರಿಗೆ ಕೃಷ್ಣದೇವರಾಯನ ನಂತರದ ದಿನಗಳು ಮತ್ತೇ ಅನೇಕ ರೀತಿಯ ಸವಾಲುಗಳ ಸರಮಾಲೆಯನ್ನೇ ತೊಡಿಸಿದುವು. ನಂತರದ ವಿಜಯನಗರದ ಅರಸು ಅಚ್ಯುತರಾಯನಿಗೆ ಕನಕರ ಕುರಿತು ಹೋದ ಪ್ರಧಾನವಾದ ದಾಯಾದಿಗಳ ದೂರು, ‘ರಾಜ್ಯದ ಬೊಕ್ಕಸ ದೇವರ ಹೆಸರಿನಲ್ಲಿ ಅಡ್ಡಾದಿಡ್ಡಿಯಾಗಿ ವ್ಯಯವಾಗುತ್ತಿದೆ’. ಪರಿಶೀಲನೆಯನ್ನೂ ಮಾಡದ ದೊರೆ ಕನಕರನ್ನು ಪದಚ್ಯುತಿಗೊಳಿಸಿದಾಗ, ಎಲ್ಲ ರೀತಿಯ ಬವಣೆಗಳು ಕನಕ ಹೃದಯವನ್ನು ಬೇಯಿಸತೊಡಗಿದವು.

‘ಆರಿಗಾರಿಲ್ಲ ಆಪತ್ಕಾಲದೊಳಗೆ
ವಾರಿಜಾಕ್ಷನ ನಾಮ ನೆನೆ ಕಂಡ್ಯ ಮನವೇ||

ಹಗೆ ಕೈಗೆ ಸಿಲುಕಿದಾಗ, ದೆಸೆಗೆಟ್ಟು
ಅಧಿಕ ವ್ಯಾಧಿಯಲಿ ಇರುವಾಗ,
ಅಸಮಾನನಾದಾಗ, ಅತಿ ಭೀತಿಗೊಂಡಾಗ
ಬಿಸಜನಾಭನ ನಾಮ ನೆನೆ ಕಂಡ್ಯ ಮನವೇ||

ಸಾಲದವರೆಳೆವಾಗ, ಚಾಡಿ ಮಾತಿಗೆ ಭೂಪ
ಘಳ ಘುಳಿಸುತ ಕೋಪವನು ತೋರಿದಾಗ
ಮೇಲು ತಾನರಿಯದೆ ನಿಂದೆಯ ಹೊಂದಿರುವಾಗ
ನೀಲ ಮೇಘಶ್ಯಾಮನ ನೆನೆ ಕಂಡ್ಯ ಮನವೇ||

ಪಂಥದಲಿರುವಾಗ, ಪದವಿ ತಪ್ಪಿರುವಾಗ
ದಂತಿ ಮದವೇರಿ ಬೆನ್ನತ್ತಿದಾಗ
ಕಂತುಪಿತ ಕಾಗಿನೆಲೆಯಾದಿಕೇಶವನ ನಿ
ಶ್ಚಿಂತೆಯಲಿ ನೀನು ನೆನೆ ಕಂಡ್ಯ ಮನವೇ||

ಈ ಕೀರ್ತನೆ ಒಂದು ರೀತಿಯಲ್ಲಿ ಕನಕರ ಆ ಸಮಯದ ಆತ್ಮ ನಿವೇದನೆಯಂತೆಯೇ ತೋರುತ್ತದೆ. ತಾವು ಎದುರಿಸಿದ ಭಂಗ ಬವಣೆಗಳನ್ನೆಲ್ಲಾ ಕಾಗಿನೆಲೆಯಾದಿಕೇಶವನ ಪಾದಕ್ಕೆ ಸಮರ್ಪಿಸಿ ‘ನಮಗೆಲ್ಲಿ ಮನೆಗಳಯ್ಯಾ ನಾರಾಯಣ?’ ಎಂದು ಕೇಳುತ್ತಾ ‘ಕಂತು ಪಿತ ಕಾಗನೆಲೆಯಾದಿಕೇಶವನೆ ನಿಶ್ಚಿಂತನಾಗಿ ನಿಮ್ಮ ಗುಡಿಯಲಿಪ್ಪೆನು’ ಎಂಬ ಭಾವದ ಸೆಲೆಯಾದ ಕನಕನೈವೇದ್ಯವೇ ಅಹುದು.

ಇಂಥ ಬವಣೆಯ ಕಾಲದಲ್ಲಿಯೇ ತಾಯಿಯನ್ನೂ, ಹುಟ್ಟಿದ ಮಗುವನ್ನೂ, ಕೆಲಕಾಲದ ನಂತರ ಮಡದಿಯನ್ನೂ ವಿಧಿಗೊಪ್ಪಿಸಿ ‘ಯಾರಿಗೆ ಯಾರಿಲ್ಲ, ಎರವಿನ ಸಂಸಾರ’ ಎನ್ನುವುದನ್ನು ಅಕ್ಷರಶಃ ಮನಗಂಡು ‘ಸಾಲದೆ ನಿನ್ನದೊಂದು ದಿವ್ಯನಾಮ’ ಎಂದುಕೊಳ್ಳುವ ಕನಕನಾಯಕರು ಕನಕದಾಸರಾಗಿ ಪರಿವರ್ತನೆಗೊಂಡು,

‘ಓದಿ ಹೇಳಿದರೊಂದು ಕಥೆಯಾಗುತಿದೆ ಮಹಾಂ
ಭೋಧಿಶಯನನೆ ವೇದ ಶಾಸ್ತ್ರ ಮುಖದಿ
ಬಾಧಿಸುವ ದುರಿತಾಗ್ನಿಗಂಬು ಶ್ರೀ ಕಾಗಿನೆಲೆ
ಯಾದಿಕೇಶವನ ನಾಮ ಸಂ ಕೀರ್ತನ’

ಎಂದು ಜಗದೊಳಿತಿಗೆ, ಆ ಮೂಲಕ ಕಾಗಿನೆಲೆಯಾದಿಕೇಶವನಿಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಾರೆ.

ಒಂದು ಪ್ರಾಂತ್ಯದ ನಾಯಕತ್ವದಿಂದ ಬಿಡುಗಡೆಗೊಂಡು ವಿಶ್ವದ ಮಾನವೀಯಧರ್ಮದ ದಾಸತ್ವಕ್ಕೇರಿದ ಕನಕದಾಸರು ಆನಂತರದ ಜೀವಿತಾವಧಿಯನ್ನೆಲ್ಲಾ ದೇಶ ನೋಡುವ, ಕೋಶ ಓದುವ, ಕನ್ನಡ ಸರಸ್ವತಿಗೆ ಅಪೂರ್ವ ಕೃತಿ ಕುಸುಮಗಳನ್ನು ಸಮರ್ಪಣೆ ಮಾಡುವ ಸಾರ್ಥಕ ಕಾರ್ಯಗಳಿಗೆ ಬಳಸಿಕೊಂಡರು. 1593 ರಲ್ಲಿ ಸಾರ್ಥಕ ಜೀವನದ ಅಂತ್ಯ ಕಂಡ ಕನಕದಾಸರು 98 ವರ್ಷಗಳ ತುಂಬು ಜೀವನದಲ್ಲಿ ಕಂಡುಂಡ ಅನುಭವಸಾರಗಳೆಲ್ಲ ಅವರ ಕೃತಿಗಳಲ್ಲಿ ಮಡುಗಟ್ಟಿವೆ.

ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯಚರಿತೆ, ಹರಿಭಕ್ತಿಸಾರ, ಅಸಂಖ್ಯಾತ ಕೀರ್ತನೆಗಳು, ಸುಳಾದಿಗಳು ಮುಂಡಿಗೆಗಳನ್ನು ರಚಿಸಿದ ಕನಕದಾಸರು ಕನ್ನಡನಾಡಿನ ಎಲ್ಲ ತಾಣಗಳ ಜೊತೆಗೆ ಗಯಾ, ಮಥುರಾ, ಕಾಶಿ, ಸ್ವಾರಕಾ, ತೀರ್ಥಯಾತ್ರೆಯನ್ನೂ ಮಾಡಿದ್ದು ಆ ಸಂದರ್ಭದಲ್ಲಿ, ಕಬೀರದಾಸರ, ರಜಪೂತ ದೊರೆ ರಾಣಾ ಪ್ರತಾಪ ಸಿಂಗರ ಆಪ್ತ ಗೆಳೆತನವೂ ದಕ್ಕಿದ್ದುದಕ್ಕೆ ರಾಣಾ ಪ್ರತಾಪಸಿಂಗ್ ಕನಕದಾಸರ ಸ್ಮರಣಾರ್ಥ ಜಯಪುರದ ಅರಮನೆಯಲ್ಲಿ ‘ಕನಕ ಬೃಂದಾವನ’ ನಿರ್ಮಿಸಿದ್ದು ಸಾಕ್ಷಿಯಾಗಿದೆ.

ಕನ್ನಡನಾಡಿನ ಬಹುತೇಕ ಎಲ್ಲಾ ಸ್ಥಳಗಳಿಗೂ ಆಧ್ಯಾತ್ಮಿಕ ಭೇಟಿ ನೀಡಿರುವ ಕನಕದಾಸರ ಹೆಸರನ್ನು ಆ ಎಲ್ಲಾ ಸ್ಥಳಗಳು ಸ್ಮರಣೀಯವಾಗಿಸಿಕೊಂಡಿವೆ ನಮ್ಮ ಚಿಕ್ಕಮಗಳೂರು ಜಿಲ್ಲೆಗೂ ಅಂತಹ ಒಂದು ಸಾರ್ಥಕ ಸ್ಮರಣಿಕೆ ಕಡೂರು ತಾಲೂಕಿನಲ್ಲಿ ಕಡೂರಿನಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ಒಂದು ಪುಟ್ಟ ಗುಡ್ಡ, ಕನಕರಾಯನ ಗುಡ್ಡ ಎಂದೇ ಹೆಸರಾದ, ಅತ್ಯಂತ ಪ್ರಶಾಂತವಾದ, ರಮಣೀಯವಾದ ಸ್ಥಳದಲ್ಲಿದೆ.

ಕನಕದಾಸರ ದಿವ್ಯಸ್ಮರಣೆಯಲ್ಲಿ ಅವರ ಹೆಸರನ್ನೇ ಹೊಂದಿರುವ ಈ ಕನಕರಾಯನ ಗುಡ್ಡದ ಮೇಲಿನ ಬಂಡೆಯೊಂದರಲ್ಲಿ ತಿರುಪತಿ ತಿಮ್ಮಪ್ಪನನ್ನೇ ಹೋಲುವಂತೆ ಅತ್ಯಪೂರ್ವ ರೀತಿಯಲ್ಲಿ ರೇಖಿಸಿರುವ ವಿಗ್ರಹವಿದೆ. ಬಂಡೆಗಲ್ಲಿನ ಮನಮೋಹಕ ಕೆತ್ತನೆ ನೋಡಿದ ಕೂಡಲೇ ಆಶ್ಚರ್ಯ, ಸಂತೋಷ ಅದ್ಭುತ ಭಾವಗಳನ್ನು ಚಿಮ್ಮಿಸಿಬಿಡುವ ಅತ್ಯಂತ ಸುಂದರವಾದ ಈ ರೇಖಾರೂಪಿ ವೆಂಕಟೇಶ್ವರನನ್ನು ಇಲ್ಲಿ ಮೂಡಿಸಿದ್ದು ಕನಕದಾಸರೇ ಎನ್ನುವುದು ಸ್ಥಳೀಯ ನಂಬಿಕೆ.

ಕನ್ನಡನಾಡಿನಲ್ಲಿ ತೀರ್ಥಯಾತ್ರೆ ಮಾಡುತ್ತಿದ್ದ ಕನಕದಾಸರು ಈ ರಮಣೀಯ ಸ್ಥಳಕ್ಕೆ ಆಗಮಿಸಿದಾಗ ಸಂಜೆಯಾಗುತ್ತಿತ್ತು. ಇಲ್ಲಿಯೇ ವಾಸ್ತವ್ಯಕ್ಕೆ ನಿರ್ಧರಿಸಿದರು. ರಾತ್ರಿ ಊಟಕ್ಕೇನೋ ಫಲಾಹರ ಸಿಕ್ಕಿತು. ಆದರೆ ಊಟಕ್ಕೆ ಮೊದಲು ಆದಿಕೇಶವನಿಗೆ ನಮಿಸಿ ಪ್ರಸಾದ ಸ್ವೀಕರಿಸುತ್ತಿದ್ದ ಕನಕದಾಸರು ಆದಿಕೇಶವನನ್ನು ಮನಸಾ ಸ್ಮರಿಸಿಕೊಂಡರು. ಆಗ ಸಮೀಪವೇ ಇದ್ದ ಬಂಡೆಯ ಮೇಲೆ ಆದಿಕೇಶವ ಶ್ರೀ ವೆಂಕಟೇಶ್ವರನ ಶೀಲಾ ರೇಖಾ ವಿಗ್ರಹ ಮೂಡಿತು. ಅಂದಿನಿಂದ ಈ ವೆಂಕಟೇಶ್ವರನನ್ನು ಕನಕದಾಸರ ಸ್ಮರಣೆಯಲ್ಲಿ ಕನಕರಾಯನೆಂದೂ, ಈ ಗುಡ್ಡವನ್ನು ಕನಕರಾಯನಗುಡ್ಡವೆಂದೂ ಕರೆಯಲಾಗುತ್ತಿದೆ. ಕನಕದಾಸರ ಸ್ಮರಣೆಗೆ ವಿಗ್ರಹ ಮೂಡಿತೆಂಬುದರಲ್ಲಿ ಉತ್ಪ್ರೇಕ್ಷೆ ಇರಬಹುದು. ಆದರೆ ಎಂದೋ ರೇಖಿಸಿ ಮರೆಯಾಗಿದ್ದ ವಿಗ್ರಹದ ಇರುವನ್ನು ಕನಕದಾಸರು ಮತ್ತೇ ತೋರಿಸಿಕೊಟ್ಟಿರುವ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಈ ರೀತಿಯಲ್ಲಿ ಕನಕದಾಸರ ಅಪೂರ್ವ ಸ್ಮರಣೆ ಈ ಸುಂದರ ನೈಸರ್ಗಿಕ ತಾಣದಲ್ಲಿರುವುದೂ ಭಾಗ್ಯವೇ. ಸುತ್ತಲಿನ ಹಳ್ಳಿ ಪಟ್ಟಣಗಳ ಬಹಳಷ್ಟು ಭಕ್ತರು ಈ ಗುಡಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಬಂಡೆಯ ಮುಂದಿದ್ದ ಮಂಟಪದ ಗುಡಿಯನ್ನು ಆಧುನಿಕ ಸೌಲಭ್ಯಗಳನ್ನು ಬಳಸಿ ನವೀಕರಣ ಮಾಡಲಾಗುತ್ತಿದೆ.

ಈ ಸ್ಥಳೀಯ ಐತಿಹ್ಯವನ್ನು ಸಂಗ್ರಹಿಸಿ ಕೊಟ್ಟ ಕಡೂರಿನ ಸಾಂಸ್ಕೃತಿಕ ಚೇತನ ಶ್ರೀ ಬಾಲುಮಚ್ಚೇರಿ ಅವರ ನೆರವನ್ನು ಸ್ಮರಿಸುತ್ತಾ ಕನಕಚೇತನದ ಹೆಜ್ಜೆ ಗುರುತುಗಳನ್ನು ಎಲ್ಲೆಲ್ಲೂ ಹುಡುಕಾಡುವ ಭಾವಸಂಭ್ರಮಕ್ಕೆ ಮನಸಾ ವಂದಿಸುವೆ.

ಮಹಾದಾರ್ಶನಿಕ ಭಕ್ತ ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು.

ಡಾ. ಮಂಜುಳಾ ಹುಲ್ಲಹಳ್ಳಿ.