ಮೂಡಿಗೆರೆ: ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಚಳುವಳಿ-ಪರಿಣಾಮಗಳು ಗೋಷ್ಠಿ ಶನಿವಾರ ಹಿರಿಯ ಪತ್ರಕರ್ತ ಜಿ.ಕೆ.ಸತ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಚಲನಚಿತ್ರ ನಟ ಅಶೋಕ್ ಅವರು ಗೋಕಾಕ್ ಮತ್ತು ಕನ್ನಡ ಚಳುವಳಿ ವಿಷಯ ಮಂಡಿಸಿ ಮಾತನಾಡಿ, ಬದುಕು ರೂಪಿಸಲು ಭಾಷಾವಾರು ಪ್ರಾಂತ್ಯಗಳನ್ನು ಮಾಡಲಾಗಿದೆ. ನಮ್ಮ ರಾಜ್ಯಕ್ಕೆ ಹೊರಗಿನಿಂದ ಯಾರೇ ಬಂದರೂ ಕನ್ನಡ ಭಾಷೆ, ಸಂಸ್ಕೃತಿಗೆ ಗೌರವ ಕೊಟ್ಟು ಬದುಕಬೇಕುವಂತಾಗಬೇಕು.

ಆದರೆ ಈಗ ವಿವಿಧ ಹುದ್ದೆ ಅಲಂಕರಿಸಬೇಕೆಂದರೆ ಆಂಗ್ಲ ಭಾಷೆ ತಿಳಿದವರಿಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ. ಇದನ್ನು ಗಮನಿಸಿದರೆ ನಾವು ನಿಜವಾಗಿಯೂ ಗೋಕಾಕ್ ಚಳುವಳಿ ಮಾಡಿದ್ದೇವಾ ಎಂಬ ಪ್ರಶ್ನೆ ನಮ್ಮಲ್ಲೇ ಮೂಡುತ್ತದೆ. ಇವತ್ತು ಚುನಾವಣೆ, ರಾಜಕೀಯ, ಮಾಧ್ಯಮಗಳು ದಾರಿ ತಪ್ಪಿವೆ. ಇದು ಅಪಾಯ. ನಾವು ರಾಷ್ಟ್ರೀಯ ಪಕ್ಷಗಳ ಗುಲಾಮರಾಗಿದ್ದೇವೆ. ಇವೆಲ್ಲವನ್ನು ಪ್ರಶ್ನಿಸಿ ಉತ್ತರ ಪಡೆಯದಿದ್ದರೆ ಕನ್ನಡ ಭಾಷೆ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಹೊಸನಗರ ಉಪನ್ಯಾಸಕ ಡಾ.ಶ್ರೀಪತಿ ಹಳಗುಂದ ಅವರು ಕನ್ನಡ ಚಳುವಳಿ ಅಂದು-ಇಂದು ವಿಷಯ ಮಂಡಿಸಿ ಮಾತನಾಡಿ, ರಾಜಕೀಯ ಚಳುವಳಿಗೆ ಲಕ್ಷಾಂತರ ಜನ ಸೇರುತ್ತಾರೆ. ಆದರೆ ಸಾಂಸ್ಕೃತಿಕ ಚಳುವಳಿಗೆ ಜನ ಸೇರುವುದಿಲ್ಲ. ಚಳುವಳಿಗಳು ವ್ಯಕ್ತಿ ಚಳುವಳಿಯಾಗಿ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ದರಾ ಬೇಂದ್ರೆ, ಪುತಿನ, ಮಾಸ್ತಿ, ಡಿವಿಜಿ, ನಾ ಕಸ್ತೂರಿ ಕನ್ನಡಿಗರಲ್ಲ. ಅಷೇ ಅಲ್ಲ. ಬೇರೆ ರಾಜ್ಯದ ಜನರು ಕೂಡ ಅದ್ಭುತ ಕನ್ನಡ ಮಾತನಾಡುತ್ತಾರೆ.

ಆದರೆ ಕನ್ನಡಿಗರ ಬಾಯಲ್ಲಿ ಕನ್ನಡ ಭಾಷೆ ಬಾರದಿರುವುದು ದುರಂತ. ಕರ್ನಾಟಕ ಉಳಿಸಿಕೊಳ್ಳಲು ೮ ಕ್ಕೂ ಹೆಚ್ಚು ಅಕಾಡೆಮಿಗಳಿವೆ. ಅವು ಎಲ್ಲಿಗೆ ಹೋಗಿದೆ ಎಂಬುದು ಪ್ರಶ್ನೆಯಾಗಿದೆ. ಸಮ್ಮೇಳನಗಳ ಸ್ಥಿತಿ ಗಮನಿಸಿದರೆ ಭವಿಷ್ಯದಲ್ಲಿ ಕನ್ನಡಕ್ಕೆ ಕಂಟಕ ಬರುವ ಸಾಧ್ಯತೆಯಿದೆ. ಅಲ್ಲದೇ ಪ್ರಾಥಮಿಕ ಹಂತದಲ್ಲಿಯೇ ಕನ್ನಡ ಇಲ್ಲವಾಗಿಸುವಂತೆ ಹುನ್ನಾರ ನಡೆಯುತ್ತಿದ್ದು, ಮತ್ತೊಂದು ಚಳುವಳಿಗೆ ಮುಂದಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಕಣಿವೆ ವಿನಯ್ ಉದ್ಘಾಟಿಸಿರು. ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್, ಬಿ.ಪ್ರಕಾಶ್, ಇಮ್ರಾನ್ ಅಹಮದ್ ಬೇಗ್, ಬಿ.ಆರ್.ಜಗದೀಶ್, ಜಯಂತಿ ಶಿವಾಜಿ, ಕೆ.ಎನ್.ಪುಂಡಲೀಕರಾಮ್, ಎಚ್.ಡಿ.ವಿನಯ್ ಮತ್ತಿತರರಿದ್ದರು.

Kannada movement-consequences concert in district literary conference