ಚಿಕ್ಕಮಗಳೂರು: ಅಂಗಡಿದಾರರು ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡ ಪದ ಬಳಕೆಗೆ ಸರ್ಕಾರ ಸೂಚಿಸಿದ್ದರೂ ಸಹ ನಿರ್ಲಕ್ಷ್ಯವಹಿಸಿರುವ ಮುಂಗಟ್ಟುದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡಸೇನೆ ಮುಖಂಡರುಗಳು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ವಿಕ್ರಮ್ ಅಮಟೆಗೆ ಶುಕ್ರವಾರ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಸೇನೆಯ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ರಾಜ್ಯಸರ್ಕಾರ ಕನ್ನಡ ಭಾಷೆಗೆ ಆದ್ಯತೆ ನೀಡಿ ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡ ಹಾಗೂ ಶೇ.೪೦ ರಷ್ಟು ಇತರೆ ಭಾಷೆ ಬಳಸುವಂತೆ ಘೋಷಿಸಿದ್ದರೂ ಚಿಕ್ಕಮಗಳೂರಿನ ಅಂಗಡಿದಾರರು ಇನ್ನೂ ಸರ್ಕಾರದ ಆದೇಶವನ್ನು ಪಾಲಿಸುತ್ತಿಲ್ಲ ಎಂದು ದೂರಿದರು.

ನಾಮಫಲಕ ಸಂಬಂಧ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ನಗರಸಭೆಗೆ ಮನವಿ ಸಲ್ಲಿಸಿದ ವೇಳೆ ಯಲ್ಲಿ ಮುಂಗಟ್ಟುದಾರರ ವಿರುದ್ಧ ಹೋರಾಟಗಾರರು ಕಾನೂನು ಮೀರದಂತೆ ಪೊಲೀಸ್ ವರಿಷ್ಟಾಧಿಕಾರಿಗಳ ಗಮನಕ್ಕೆ ತರಬೇಕೆಂದು ಸೂಚಿಸಿದನ್ವಯ ಇಂದು ಎಸ್ಪಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿ ಸಲಾಗಿದೆ ಎಂದರು.

ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ನಾಮಫಲಕ ವಿಷಯದಲ್ಲಿ ಎಚ್ಚೆತ್ತುಕೊಂಡು ಸರ್ಕಾರದ ಆದೇಶದಂತೆ ಜಿಲ್ಲೆಯ ಪ್ರತಿಯೊಂದು ಅಂಗಡಿಯ ಫಲಕಗಳನ್ನು ಬದಲಾವಣೆಗೆ ಮುಂದಾಗಬೇಕು. ವಿಳಂಭ ದೋರಣೆ ಅನುಸರಿಸಿದರೆ ಕನ್ನಡಸೇನೆ ಮುಖಂಡರುಗಳು ಬೀದಿಗೀಳಿದು ನಾಮಫಲಕಗಳಿಗೆ ಮಸಿ ಬಳೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಆ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ನಗರದಲ್ಲಿ ಯಾವುದಾದರು ಅನಾಹುತಗಳು ಸಂಭವಿಸುವ ಮೊದ ಲೇ ವರಿಷ್ಟಾಧಿಕಾರಿಗಳು ಸೂಕ್ತ ಕೈಗೊಂಡು ಶಾಂತಿ ಕಾಪಾಡಿಕೊಳ್ಳಬೇಕು. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಕ್ರಮ ವಹಿಸದಿದ್ದಲ್ಲಿ ಮುಂದಿನ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಕಾರ್ಮಿಕ ಪಡೆ ಉಪಾಧ್ಯಕ್ಷ ಶಂಕರೇಗೌಡ, ಮುಖಂಡರುಗಳಾದ ಹರೀಶ್, ಅನ್ವರ್, ಪಾಲಾಕ್ಷಿ, ರವಿ, ದೇವರಾಜ್, ಸತೀಶ್ ಮತ್ತಿತರರಿದ್ದರು.

Kannada Sena demands action against those who do not use Kannada nameplate