ಚಿಕ್ಕಮಗಳೂರು: ನಗರದ ಸಂತೇ ಮೈದಾನದ ತಮಿಳು ಕಾಲೋನಿಯ ಕರುಮಾರಿಯಮ್ಮ ದೇವಾಲಯದಲ್ಲಿ ಇಂದು ಕರಗ ಮಹೋತ್ಸವ ವೈಭವಯುತವಾಗಿ ಜರುಗಿತ್ತು.

ದಂಟರಮಕ್ಕಿಯ ಕೆರೆಕೋಡಮ್ಮ ದೇವಾಲಯದ ಆವರಣದಲ್ಲಿ ಹೂಕರಗದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಾ ವಿಧಿವಿಧಾನಗಳನ್ನು ನಡೆಸಲಾಯಿತು.

ಮಹಿಳೆಯರು ಮಕ್ಕಳಾಧಿಯಾಗಿ ತಮ್ಮ ಬಾಯಿಗಳಿಗೆ ತ್ರಿಶೂಲಗಳನ್ನು ಚುಚ್ಚಿಕೊಂಡು ಹರಕೆ ತೀರಿಸಿದರೆ, ಹತ್ತಾರು ಮಂದಿ ಯುವಕರು ಸುಡು ಬಿಸಿಲನ್ನು ಲೆಕ್ಕಿಸದೇ ತಮ್ಮ ಬೆನ್ನುಗಳಿಗೆ ಕಬ್ಬಿಣದ ಕೊಂಡಿಗಳನ್ನು ಚುಚ್ಚಿಸಿಕೊಂಡು ಅದಕ್ಕೆ ದಾರಗಳನ್ನು ಅಳವಡಿಸಿ ಆಟೋ, ಕಾರು, ಟ್ರ್ಯಾಕರ್‌ಗಳನ್ನು ಕೆರೆಕೋಡಮ್ಮ ದೇವಾಲಯದ ಆವರಣದಿಂದ ಸಂತೇಮೈದಾನದ ಕರುಮಾರಿಯಮ್ಮ ದೇವಾಲಯದವರೆಗೂ ಎಳೆಯುವ ಮೂಲಕ ಹರಕೆ ತೀರಿಸಿದರು.

ಸಂಜೆ ೬ ಗಂಟೆಗೆ ಸುಮಾರಿಗೆ ದೇವಾಲಯದ ಆವರಣದಲ್ಲಿ ಸುಮಾರು ೨೦ ಅಡಿ ಎತ್ತರದ ರಾಟೆಗಳಿಗೆ ಹಾಕಿದ ದಾರಕ್ಕೆ ಬೆನ್ನು ಕೈಕಾಲುಗಳಿಗೆ ಕಬ್ಬಿಣದ ಕೊಂಡಿ ಸಿಕ್ಕಿಸಿಕೊಂಡು ಅಂತರ ಮಾರ್ಗದಲ್ಲಿ ಹಾರಾಡುವ ಮೂಲಕ ಮೈನವಿರೇಳುಸುವ ಹರಕೆ ತೀರಿಸಿ ಭಕ್ತಿಯ ಪರಕಾಷ್ಠೆ ಮೆರೆದರು.

ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಗೌರವಾಧ್ಯಕ್ಷ ಜಿ.ರಘು, ಅಧ್ಯಕ್ಷ ಬಿ. ಮುನಿ, ಉಪಾಧ್ಯಕ್ಷ ಎಸ್.ಎನ್ ಮಂಜು, ಪ್ರಧಾನ ಕಾರ್ಯದರ್ಶಿ ಆರ್. ಮಂಜು, ಖಜಾಂಚಿ ಶಿವಕುಮಾರ್, ಕಾರ್ಯದರ್ಶಿ ಕೆ.ವೇಲನ್, ಮುಖಂಡರುಗಳಾದ ಕೆ.ಕುಮಾರ್, ಕೆ.ರವಿ, ಶರವಣ, ಹರೀಶ್‌ಕುಮಾರ್, ಅರ್ಚಕರಾದ ಮೂರ್ತಿ, ವೆಂಕಟೇಶ್ ಸೇರಿದಂತೆ ಹಲವರಿದ್ದರು.

Karaga Mahotsava at Karumariyamma temple