ಚಿಕ್ಕಮಗಳೂರು: : ದಿನದ ೨೪ ಗಂಟೆಗಳ ಕಾಲ ವಿಶ್ರಾಂತಿ ಇಲ್ಲದೆ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ರಕ್ಷಣೆ ಮತ್ತು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಅಪಾರವಾದದ್ದು ಎಂದು ನಿವೃತ್ತ ಹೆಚ್ಚು ಪೊಲೀಸ್ ಅಧಿಕ್ಷಕರು-೨ ಯೋಗೇಂದ್ರನಾಥ ಎಂ.ಎಂ. ತಿಳಿಸಿದರು.

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಂದು ನಗರದ ರಾಮನಹಳ್ಳಿ ಪೊಲೀಸ್ ಕವಾಯತ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಪೊಲೀಸರಿಗೆ ಸಹಕಾರ ನೀಡುವುದು ಸಮಾಜ ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಪೊಲೀಸ್ ಇಲಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ದಿನ ೨೪ ಗಂಟೆಗಳ ಕಾಲ ವಿಶ್ರಾಂತಿ ಇಲ್ಲದೆ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ಆಸ್ತಿ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ತೊಡಗಿರುವ ಅಂಶ ಎಲ್ಲರಿಗೂ ತಿಳಿಸಿರುವ ವಿಷಯವಾಗಿದೆ. ಸಾರ್ವಜನಿಕರಲ್ಲಿ ಪೊಲೀಸ್ ಎಂದರೆ ಭಯದ ವಾತಾವರಣ ಇದೆ.

ನ್ಯಾಯಕೋರಿ ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರಿಗೆ ಸಕಾಲಕ್ಕೆ ಸ್ಪಂಧಿಸುವುದು ಪೊಲೀಸ್ ಸಿಬ್ಬಂದಿಗಳ ಆದ್ಯ ಕರ್ತವ್ಯವಾಗಿದ್ದು, ತಮ್ಮ ಕುಟುಂಬ ಹಾಗೂ ಉತ್ತಮ ಜೀವನ ನಿರ್ವಹಣೆಗೆ ನೆರವಾಗಿರುವ ಪೊಲೀಸ್ ಇಲಾಖೆಗೆ ಸದಾ ಋಣಿಯಾಗಿರುವ ಜೊತೆಗೆ ಇಲಾಖೆಗೆ ಧಕ್ಕೆಯಾಗದಂತೆ ಗೌರವ ಎತ್ತಿ ಹಿಡಿದಿರುವ ಕಾರ್ಯವನ್ನು ಮಾಡಬೇಕು. ಕರ್ತವ್ಯದ ದಿನಗಳಲ್ಲಿ ತಮ್ಮ ವೇತನದಲ್ಲಿ ಗಳಿಸಿದ ಸ್ವಲ್ಪ ಹಣವನ್ನು ಉಳಿಸಿ ನಿವೃತ್ತಿಯ ನಂತರ ನೆಮ್ಮದಿಯ ಬದುಕು ಸಾಗಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಧ್ವಜ ದಿನಾಚರಣೆ ಮಹತ್ವ ಮತ್ತು ರಾಜ್ಯ ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರದಿ ವಾಚನ ಮಾಡಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅತಿಥಿಗಳನ್ನು ಸ್ವಾಗತಿಸಿದರು

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲ ಕೃಷ್ಣ, ನಿವೃತ್ತ ಪೊಲೀಸ್ ಸಂಘದ ಅದ್ಯಕ್ಷ ರಮೇಶ್ ಹಾಗೂ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.

Karnataka State Police Flag Day Celebration