ಮಂಗಳೂರು: ಬಿಜೆಪಿಯ ಯುವ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆಗೆ ಒಂದು ವಾರ ಹಿಂದೆಯೆ ಹಂತಕರು ಯೋಜನೆ ರೂಪಿಸಿದ್ದರು. ಆದರೆ ಪ್ರತಿ ನಿತ್ಯ ಪತ್ನಿ ಜೊತೆ ಪ್ರವೀಣ್‌ ಬರುತ್ತಿದ್ದ ಹಿನ್ನೆಲೆಯಲ್ಲಿ ಹತ್ಯೆ ದಿನವನ್ನು ಮುಂದೂಡುತ್ತಿದ್ದರು. ಆದರೆ ಜುಲೈ 26ರ ರಾತ್ರಿ ಪತ್ನಿ ಇಲ್ಲದ ಸಮಯದಲ್ಲಿ ಹತ್ಯೆ ಮಾಡಿದ ವಿಚಾರ ಈಗ ತಿಳಿದು ಬಂದಿದೆ.

ಪ್ರವೀಣ್ ಹತ್ಯೆ ಮಾಡಿದ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಾದ ಶಿಯಾಬ್, ರಿಯಾಝ್, ಬಶೀರ್ ಬೆಳ್ಳಾರೆ ಆಸುಪಾಸಿನ ನಿವಾಸಿಗಳಾಗಿದ್ದಾರೆ. ಮಸೂದ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಕ್ಕೆ ಈ ಕೃತ್ಯ ನಡೆದಿದೆ ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ಹತ್ಯೆ ಮಾಡಿದ್ದು ಯಾಕೆ?
ಜುಲೈ 19ರಂದು ಬೆಳ್ಳಾರೆಯಲ್ಲಿ ಮಸೂದ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಜುಲೈ 21ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಸೂದ್ ಸಾವನ್ನಪ್ಪಿದ್ದ. ಈ ಕೊಲೆಯಾದ ಹಿನ್ನೆಲೆಯಲ್ಲಿ ಪ್ರತೀಕಾರಕ್ಕಾಗಿ ಜುಲೈ 21ರಂದೇ ಬೆಳ್ಳಾರೆಯಲ್ಲೇ ಸಂಘ ಪರಿವಾರದ ಪ್ರಮುಖನ ಹತ್ಯೆಗೆ ಹಂತಕರು ಸ್ಕೆಚ್‌ ಹಾಕಿದ್ದರು.

ಬೆಳ್ಳಾರೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರ್ ಕೋಳಿ ಉದ್ಯಮವನ್ನೂ ಆರಂಭಿಸಿ ಯಶಸ್ವಿಯಾಗಿದ್ದರು. ಹೀಗಾಗಿ ಪ್ರವೀಣ್ ಅವರನ್ನು ಹತ್ಯೆಯನ್ನು ಮಾಡಲು ಗ್ಯಾಂಗ್‌ ಸಿದ್ಧತೆ ಮಾಡಿತ್ತು. ಹತ್ಯೆಗಾಗಿ ಒಂದು ವಾರಗಳ ತಯಾರಿ ಮಾಡಿದ್ದ ಹಂತಕರು ಜುಲೈ 21ರ ಬಳಿಕ ಪ್ರತಿದಿನ ಪ್ರವೀಣ್ ಅಂಗಡಿ ಬಳಿ ಬರುತ್ತಿದ್ದರು. ಆದರೆ ಪ್ರವೀಣ್ ಜೊತೆಗೆ ಪತ್ನಿ ಇರುತ್ತಿದ್ದನ್ನು ಗಮನಿಸಿ ಮರಳುತ್ತಿದ್ದರು.

ಜುಲೈ 26 ರಂದು ಪ್ರವೀಣ್ ಒಬ್ಬರೇ ಅಂಗಡಿಯಲ್ಲಿ ಇರುವುದನ್ನು ಗಮನಿಸಿದ್ದ ಗ್ಯಾಂಗ್‌ ಹತ್ಯೆ ಮಾಡಿ ಹಳೆಯ ಸ್ಪ್ಲೆಂಡರ್ ಬೈಕ್ ಏರಿ ಪರಾರಿಯಾಗಿತ್ತು. ನಂಬರ್ ಪ್ಲೇಟ್ ಅಸ್ಪಷ್ಟವಾಗಿ ಕಾಣುತ್ತಿದ್ದ ಬೈಕ್‌ ಏರಿದ್ದ ಇವರು ಬಳಿಕ ಕಾರಿನನಲ್ಲಿ ಕೇರಳಕ್ಕೆ ಪರಾರಿಯಾಗಿದ್ದರು.

ಮೊದಲೇ ಪ್ಲ್ಯಾನ್‌:
ಪ್ರವೀಣ್‌ ಹತ್ಯೆಗೆ ಮೊದಲೇ ಕೇರಳದಲ್ಲಿ ಎಲ್ಲಿ ತಂಗಬೇಕು ಎಂಬುದನ್ನು ಹಂತಕರು ಪ್ಲ್ಯಾನ್‌ ಮಾಡಿದ್ದರು. ಅದರಂತೆ ಮೊದಲು ತಲಶೇರಿ, ಬಳಿಕ ಕಣ್ಣೂರು, ಮಲ್ಲಪುರಂನಲ್ಲಿರುವ ಅಡಗುತಾಣದಲ್ಲಿ ತಂಗಿದ್ದರು. 15 ದಿನದ ಅಂತರದಲ್ಲಿ ಏಳು ಕಡೆಗಳಲ್ಲಿ ಹಂತಕರು ಅಶ್ರಯ ಪಡೆದಿದ್ದರು. ಹಂತಕರು ನೆಲೆಸಿದ್ದ ಜಾಗ ಪತ್ತೆಯಾಗಿ ಪೊಲೀಸರು ಸ್ಥಳಕ್ಕೆ ಹೋದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗುತ್ತಿದ್ದರು.

ಪೊಲೀಸರ ಪ್ಲ್ಯಾನ್‌ ಏನಿತ್ತು?
ಆರೋಪಿಗಳ ಬುಡಸಮೇತ ಹೆಡೆಮುರಿ ಕಟ್ಟಲು ಎಡಿಜಿಪಿ ಅಲೋಕ್ ಕುಮಾರ್ ಪ್ಲ್ಯಾನ್‌ ಮಾಡಿದ್ದರು. ಮೊದಲು ಹಂತಕರ ಕುಟುಂಬ ಬಳಿಕ ಹಂತಕರ ಆತ್ಮೀಯರ ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಕೃತ್ಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗವಹಿಸಿದವರ ಎಲ್ಲರ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಹಂತಕರಿಗೆ ಆಶ್ರಯ ನೀಡಿದವರಿಗೂ ಖಡಕ್ ಎಚ್ಚರಿಕೆ ನೀಡಿದ್ದರು.

ಹದಿನೈದು ದಿನದಲ್ಲಿ ಐದು ಬಾರಿ ಬೆಳ್ಳಾರೆಗೆ ಭೇಟಿ ನೀಡಿದ್ದ ಎಡಿಜಿಪಿ ಅಲೋಕ್ ಕುಮಾರ್ ಬುಧವಾರವೂ ಆರು ಜಿಲ್ಲೆಯ ಎಸ್ಪಿಗಳ ಜೊತೆ ಸಭೆ ನಡೆಸಿದ್ದರು. ಹಂತಕರಿಗೆ ಆಶ್ರಯ ನೀಡಿದವರಿಗೆ ಅಡಗುತಾಣಗಳಿಗೆ ಸೇನಾ ಮಾದರಿಯಲ್ಲೇ ಕಾರ್ಯಾಚರಣೆ ಮಾಡಲಾಗುವುದು ಎಚ್ಚರಿಕೆಯ ಸಂದೇಶವನ್ನು ಅಲೋಕ್‌ ಕುಮಾರ್‌ ರವಾನಿಸಿದ್ದರು. ಎಚ್ಚರಿಕೆ ನೀಡಿದ ಬೆನ್ನಲ್ಲೇ ಹಂತಕರು ಸೆರೆಯಾಗಿದ್ದಾರೆ ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ಸಿಕ್ಕಿದೆ.

Key accused in Praveen Nettar’s murder arrested