ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂದಿನ ಹಾಲು ಹಾಗೂ ಮೊಸರಿನ ದರ ಹೆಚ್ಚಳವನ್ನು ತಡೆದಿದ್ದು, ಸಿಎಂ ಸೂಚನೆ ನಂತರ ದರ ಏರಿಕೆ ಆದೇಶವನ್ನು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ(ಕೆಎಂಎಫ್) ಹಿಂಪಡೆದಿದೆ.

ಕೆಎಂಎಫ್ ನಾಳೆಯಿಂದಲೇ ಜಾರಿಗೆ ಬರುವಂತೆ ನಂದಿನ ಹಾಲು ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ, ಹಾಲಿನ ದರ ಏರಿಕೆ ಬಗ್ಗೆ ನವೆಂಬರ್ 20 ರಂದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು. ಅಲ್ಲದೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು.

ಕಲಬುರಗಿಯ ಸೇಡಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರೈತರಿಗೆ ಅನುಕೂಲವಾಗುವಂತೆ ಹಾಗೂ ಜನರಿಗೆ ಹೊರೆಯಾಗದಂತೆ ಚರ್ಚಿಸಿ ನವೆಂಬರ್ 20ರ ಬಳಿಕ ಹಾಲಿನ ದರ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಿಎಂ ಬೊಮ್ಮಾಯಿ ಮಧ್ಯ ಪ್ರವೇಶದ ನಂತರ ಹಾಲು ಮತ್ತು ಮೊಸರಿನ ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.

KMF withdraws order to hike nandini milk prices