ಚಿಕ್ಕಮಗಳೂರು: ಕಟ್ಟಡ ಕಾರ್ಮಿಕರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಹಮಾಲಿ ಕಾರ್ಮಿಕರಿಗೂ ನೀಡುವಂತೆ ಒತ್ತಾಯಿಸಿ ಸಂಘಟಿತ ಹೋರಾಟಕ್ಕೆ ಮುಂದಾಗಬೇಕೆಂದು ಸಿಪಿಐ ನ ಜಿಲ್ಲಾ ಕಾರ್ಯದರ್ಶಿ ಎಚ್ ಎಂ ರೇಣುಕಾರಾಧ್ಯ ಹೇಳಿದರು.

ನಗರದ ತಮಿಳು ಕಾಲೋನಿಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಗರದ ಹಮಾಲಿ ಕಾರ್ಮಿಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಟ್ಟಡ ಕಾರ್ಮಿಕರಿಗೆ ಸರ್ಕಾರ ನಿವೃತ್ತಿ ವೇತನ,ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮದುವೆಗೆ ಸಹಾಯಧನ, ಚಿಕಿತ್ಸಾವೆಚ್ಚ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಹಮಾಲಿ ಕಾರ್ಮಿಕರು ಅವರಷ್ಟೇ ಶ್ರಮಪಟ್ಟು ದುಡಿದರು ಈ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿರುವುದು ದುರಾದೃಷ್ಟಕರ ಎಂದು ಹೇಳಿದರು.

ಅಸಂಘಟಿತ ಕಾರ್ಮಿಕರೆಂದು ಗುರುತಿಸಲ್ಪಡುತ್ತಿರುವ ಹಮಾಲಿ ಕಾರ್ಮಿಕರುಗಳಿಗೆ ಇಂದಿಗೂ ವಾಸಿಸಲು ಮನೆ ಇಲ್ಲ, ಸರ್ಕಾರದ ಸೌಲಭ್ಯಗಳಿಂದ ಸಂಪೂರ್ಣ ವಂಚಿತರಾಗಿ ಸಂಕಷ್ಟದಲ್ಲಿ ಬದುಕುತ್ತಿದ್ದು ಅವರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಕಾಳಜಿ ವಹಿಸುವ ಅಗತ್ಯವಿದೆ ಎಂದು ಹೇಳಿದರು.

ಅಧ್ಯಕ್ಷ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಜಿ ರಘು ಮಾತನಾಡಿ ರೈತರು ಮತ್ತು ಕಾರ್ಮಿಕರಿಲ್ಲದ ಪ್ರಪಂಚವನ್ನು ಊಹಿಸಲೂ ಸಾಧ್ಯವಿಲ್ಲಾ. ಒಂದು ದಿನ ಕಾರ್ಮಿಕರು ತಮ್ಮ ಕಾರ್ಯತೊರೆದು ನಿಷ್ಕ್ರಿಯರಾದರೆ ವ್ಯವಸ್ಥೆ ದಿವಾಳಿಯತ್ತ ಸಾಗುತ್ತದೆ ಎಂದರು.

ದೇಶವನ್ನು ಆಳಬೇಕಾದ ಬಹು ಸಂಖ್ಯಾತ ಕಾರ್ಮಿಕರು ,ರೈತರು ಕಾರ್ಪೊರೇಟ್ ಸಂಸ್ಥೆಗಳ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗುವಂತಾಗಿದೆ. ಕಾರ್ಮಿಕರು ಮತ್ತು ರೈತರು ತಮ್ಮ ಪರವಾದ ಸರ್ಕಾರಗಳನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

ಕಾರ್ಮಿಕರಿಂದ ದುಡಿಸಿಕೊಳ್ಳುವ ಜನ ಐಷಾರಾಮಿಯಾಗಿ ಜೀವನ ಮಾಡುತ್ತಿದ್ದಾರೆ ಆದರೆ ಬೆವರು ಹರಿಸಿ ಶ್ರಮಿಸುವ ಕಾರ್ಮಿಕರು ಯಾವುದೇ ಸೌಲಭ್ಯಗಳಿಲ್ಲದೆ ನರಳುತ್ತಿದ್ದಾರೆ .ತಮ್ಮ ಹಕ್ಕುಗಳಿಗಾಗಿ ಕಾರ್ಮಿಕರು ಪ್ರಶ್ನಿಸುವಂತಾಗಬೇಕು, ತಮಗೆ ಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟಕ್ಕೆ ಮುಂದಾಗಬೇಕೆಂದು ಹೇಳಿದರು.

ಪತ್ರಕರ್ತ ಪಿ.ರಾಜೇಶ್ ಮಾತನಾಡಿ ಹಸಿವಿಗೆ ಜಾತಿ,ಧರ್ಮದ ಸೋಂಕಿಲ್ಲ. ಹಮಾಲಿ ಕಾರ್ಮಿಕರ ಸಂಘಟನೆಯಲ್ಲಿ ಎಲ್ಲಾ ಜಾತಿಯ ಎಲ್ಲಾ ವರ್ಗದ ಜನರು ಅಂದಿನ ತುತ್ತಿಗಾಗಿ ಶ್ರಮಪಟ್ಟು ದುಡಿಯುತ್ತಿದ್ದಾರೆ. ನಿಜವಾದ ವಿವಿಧತೆಯಲ್ಲಿ ಏಕತೆ ಇರುವುದು ಹಮಾಲಿಕಾರ್ಮಿಕರ ಸಂಘದಲ್ಲಿ ಎಂದು ಹೇಳಿದರು.

ವರ್ತಕರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರ ಪಾತ್ರ ಪ್ರಮುಖವಾದದ್ದು. ಕಾರ್ಮಿಕರಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ ಗುರುಮೂರ್ತಿ, ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ರಹೀಂಕಾಕಾ, ಕಾರ್ಯದರ್ಶಿ ಎಸ್ .ಎನ್ ಮಂಜು,ವರ್ತಕರ ಸಂಘದ ಕಾರ್ಯದರ್ಶಿ ತನೋಜ್ ನಾಯ್ಡು,ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಪಾಪಣ್ಣ, ಹಮಾಲಿ ಕಾರ್ಮಿಕರ ಸಂಘದ ಹಾಲಪ್ಪ, ಸರವಣ,ನಾಗರಾಜ , ಗುರುಮೂರ್ತಿ ಸೇರಿದಂತೆ ಹಲವರು ಇದ್ದರು.

ಈ ಕಾರ್ಯಕ್ರಮಕ್ಕೂ ಮೊದಲು ನೂರಾರು ಹಮಾಲಿ ಕಾರ್ಮಿಕರು ಸಮವಸ್ತ್ರ ತೊಟ್ಟು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಡ್ರಮ್ಸ್ ವಾದನಕ್ಕೆ ನರ್ತಿಸಿ ಸಂಭ್ರಮಿಸಿದರು.

Labor Day celebration organized by labor union