ಚಿಕ್ಕಮಗಳೂರು: ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆರ್‌ಟಿಒ ಕಛೇರಿಯ ಅಟೆಂಡರ್ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಟೆಂಡರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಪ್ರಾದೇಶಿಕ ಸಾರಿಗೆ ಕಚೇರಿಯ ಅಟೆಂಡರ್ ಲತಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದಿದ್ದು, ನಗರದ ಕೆಂಪನಹಳ್ಳಿ ಬಡಾವಣೆ ಪ್ರಕಾಶ್ ೮ ಬಾಡಿಗೆ ವಾಹನಗಳನ್ನು ಓಡಿಸಲು ಆರ್‌ಟಿಒ ಕಚೇರಿಯಿಂದ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಪ್ರಕಾಶ್ ಅವರ ಅರ್ಜಿ ತಿರಸ್ಕರಿಸಿದ್ದರು.

ಈ ಹಿನ್ನೆಲೆಯಲ್ಲಿ ಅವರು ಆರ್‌ಟಿಒ ಕಚೇರಿಗೆ ತೆರಳಿ ಅರ್ಜಿ ತಿರಸ್ಕಾರ ಸಂಬಂಧ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಮಧುರಾ ಅವರನ್ನು ಪ್ರಶ್ನಿಸಿದ್ದರು. ಈ ವೇಳೆ ಅವರು ಪ್ರತೀ ವಾಹನಕ್ಕೆ ತಲಾ ೧ ಸಾವಿರದಂತೆ ೮ ಸಾವಿರ ಹಣ ನೀಡಬೇಕೆಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗುತ್ತಿದೆ.

ಪ್ರಕಾಶ್ ೮ ವಾಹನಗಳಿಗೆ ಪರವಾನಿಗೆ ನೀಡಬೇಕೆಂದು ಮತ್ತೆ ಅರ್ಜಿ ಸಲ್ಲಿಸಿ ಅದಕ್ಕೆ ಶುಲ್ಕವನ್ನೂ ಪಾವತಿಸಿದ್ದರು. ಅಲ್ಲದೇ ಮುಂಗಡವಾಗಿ ೨ ಸಾವಿರ ರೂ. ಲಂಚವನ್ನು ಅಧಿಕಾರಿಗಳಿಗೆ ನೀಡಿದ್ದರೆಂದು ತಿಳಿದು ಬಂದಿದ್ದು, ಬಾಕಿ ೩ ಸಾವಿರ ಹಣ ನೀಡುವಂತೆ ಪೀಡಿಸಿದ್ದರಿಂದ ಬೇಸತ್ತ ಪ್ರಕಾಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಸೋಮವಾರ ಆರ್‌ಟಿಒ ಕಚೇರಿಯಲ್ಲಿ ಸಂಜೆ ಅಟೆಂಡರ್ ಲತಾ ಎಂಬುವರು ೩ ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಲಂಚದ ಹಣದೊಂದಿಗೆ ಅಟೆಂಡರ್ ಲತಾ ಪೊಲೀಸರ ಬಲೆಗೆ ಬಿದ್ದಿದ್ದು, ಅಟೆಂಡರ್ ಲತಾ ಆರ್‌ಟಿಒ ಅಧಿಕಾರಿ ಮಧುರಾ ಪರವಾಗಿ ಲಂಚ ಸ್ವೀಕರಿಸುತ್ತಿದ್ದರೆಂದು ಎಂಬ ಆರೋಪ ಮೇರೆಗೆ ವಿಚಾರಣೆ ನಡೆಯುತ್ತಿದ್ದು, ಲಂಚದ ಹಣದೊಂದಿಗೆ ಸಿಕ್ಕಿಬಿದ್ದ ಅಟೆಂಡರ್ ಲತಾ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ ಪಡಿಸಿದ್ದಾರೆ.

Lokayukta police trap RTO office attendant