ಬೆಂಗಳೂರು: ಮತದಾನದ ದಿನವಾದ ಬುಧವಾರ ನಂದಿ ಬೆಟ್ಟಸೇರಿ ರಾಜ್ಯದ ಕೆಲ ಪ್ರವಾಸಿ ತಾಣಗಳು ಬಂದ್‌ ಆಗಿದ್ದರೆ, ಇನ್ನು ಕೆಲವೆಡೆ ಮತದಾನ ಮಾಡಿದ ಗುರುತು ತೋರಿಸಿದರಷ್ಟೇ ಪ್ರವಾಸಿಗರಿಗೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಮತದಾನದ ದಿನದ ರಜೆಯ ಲಾಭ ಪಡೆದು ಸಾರ್ವಜನಿಕರು ಪ್ರವಾಸ ಹೋಗುತ್ತಾರೆ ಎಂಬ ಕಾರಣಕ್ಕೆ ಈ ರೀತಿಯ ನಿರ್ಬಂಧ, ನಿಯಮ ಜಾರಿ ಮಾಡಲಾಗಿದೆ.

ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ(Karnataka tourist place) ನಂದಿ ಬೆಟ್ಟ, ತುಂಗಭದ್ರಾ ಡ್ಯಾಂ, ಜೋಗ ಜಲಪಾತ, ತಾವರೆಕೊಪ್ಪ ಹುಲಿ-ಸಿಂಹಧಾಮ, ಸಿಗಂದೂರು ಚೌಡೇಶ್ವರಿ ದೇಗುಲ, ತೀರ್ಥಹಳ್ಳಿಯಲ್ಲಿರುವ ಕುವೆಂಪು ಅವರು ಕಾಲಕಳೆದ ಕವಿಶೈಲ ಸೇರಿ ಹಲವು ಪ್ರವಾಸಿ ತಾಣಗಳು ಬಂದ್‌ ಆಗಿರಲಿವೆ.

ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಅಬ್ಬಿಜಲಪಾತ, ಮಲ್ಲಳ್ಳಿ, ರಾಜಾಸೀಟು, ಜನರಲ್‌ ತಿಮ್ಮಯ್ಯ ಮ್ಯೂಸಿಯಂ ಮತ್ತಿತರ ಪ್ರವಾಸಿ ತಾಣಗಳು, ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯ, ಬೀದರ್‌ ಜಿಲ್ಲೆಯ ಎಲ್ಲ ದೇಗುಲಗಳು, ಕೋಟೆಗಳಿಗೆ ಮತದಾನ ಮಾಡಿದ ಗುರುತು ತೋರಿಸಿದರಷ್ಟೇ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಆದರೆ ಹೊರರಾಜ್ಯದ ಪ್ರವಾಸಿಗರಿಗೆ ಮಾತ್ರ ಪ್ರವಾಸಿ ತಾಣ ವೀಕ್ಷಣೆಗೆ ಯಾವುದೇ ನಿರ್ಬಂಧ ಇಲ್ಲ.

ಉಳಿದಂತೆ ಹಂಪಿ, ಗೋಕರ್ಣ, ಮುರುಡೇಶ್ವರ, ಉಡುಪಿ ಶ್ರೀಕೃಷ್ಣ ದೇಗುಲ ಸೇರಿದಂತೆ ಉತ್ತರ ಕನ್ನಡದ ಪ್ರವಾಸಿ ತಾಣ, ಗದಗ ಬಿಂಕದಕಟ್ಟಿಪ್ರಾಣಿ ಸಂಗ್ರಹಾಲಯ, ಮಲ್ಪೆ, ಮಂಗಳೂರು, ಗೋಕರ್ಣ, ಕಾರವಾರ ಬೀಚ್‌ಗಳು ಸೇರಿದಂತೆ ಉಳಿದೆಡೆ ಯಾವುದೇ ನಿರ್ಬಂಧ ಇಲ್ಲ. ಪ್ರವಾಸಿಗರು, ಭಕ್ತರು ಇಲ್ಲಿಗೆ ಭೇಟಿ ನೀಡಬಹುದಾಗಿದೆ.

Many tourist spots in Nandibetta and Joga are closed today