ಹುಣಸೂರು :  ಕಾಂಗ್ರೆಸ್‌ ನನ್ನ ಮನೆಯಿದ್ದಂತೆ, ಹಾಗಾಗಿ ತವರು ಪಕ್ಷಕ್ಕೆ ಮರಳಲು ಮನಸು ಮಾಡಿದ್ದೇನೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

ಪಟ್ಟಣದ ಕನಕಭವನದಲ್ಲಿ ಶುಕ್ರವಾರ ತಮ್ಮ ಅಭಿಮಾನಿಗಳೊಂದಿಗೆ ಆಯೋಜಿಸಿದ್ದ ವಿಶ್ವಾಸ ಸಭೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಆಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ನನ್ನನ್ನು ಆರಿಸಿ ಕಳುಹಿಸಿದ ಮತದಾರ, ರಾಜಕೀಯ ದೀಕ್ಷೆ ನೀಡಿದ ದೇವರಾಜ ಅರಸರು ಮತ್ತು ಹಿರಿಯರಾದ ಎಚ್‌.ಡಿ. ದೇವೇಗೌಡರ ಮರ್ಜಿಗೆ ಒಳಗಾಗಿದ್ದೇನೆಯೇ ಹೊರತು, ಇನ್ನಾರದೇ ಮರ್ಜಿಯಲ್ಲಿ ನಾನಿಲ್ಲ.

2017ರಲ್ಲಿ ಕಾಂಗ್ರೆಸ್‌ ತೊರೆದ ನಾನು ಮತ್ತೆ ಅದೇ ಪಕ್ಷಕ್ಕೆ ತೆರಳಲು ಮನಸು ಮಾಡಿದ್ದೇನೆ. ಎಲ್ಲ ಪಕ್ಷಗಳಲ್ಲೂ ಉತ್ತಮ ತತ್ವಾದರ್ಶಗಳಿವೆ, ಆದರೆ ಅದರ ಜಾರಿಯಲ್ಲಿ ಎಲ್ಲವೂ ಎಡವಿದೆ. ಕಾಂಗ್ರೆಸ್‌ನಲ್ಲಿದ್ದರೆ ನನಗೊಂದು ಸಮಾಧಾನ ಸಿಗುತ್ತದೆ. ನನ್ನ ಮನೆಯಲ್ಲಿ ಇದ್ದೇನೆಂಬ ಭಾವನೆ ಮೂಡುತ್ತದೆ. 2023ರ ಚುನಾವಣಾ ರಾಜಕೀಯದಲ್ಲಿ ನಾನಿಲ್ಲ. ಹುಣಸೂರಿನ ಜನರು ನನ್ನನ್ನು ತಮ್ಮ ನಾಯಕನನ್ನಾಗಿ ಆರಿಸಿ ಕಳುಹಿಸಿದ್ದಾರೆ. 14 ತಿಂಗಳ ಕಾಲ ಶಾಸಕನಾಗಿ 150ಕ್ಕೂ ಹೆಚು ಕೋಟಿ ರು.ಗಳ ಅಭಿವೃದ್ಧಿ ಕಾರ್ಯ ಮಾಡಿದ ಸಮಾಧಾನ ನನ್ನದಾಗಿದೆ ಎಂದು ಹೇಳಿದರು.

ಎಲ್ಲ ಪಕ್ಷಗಳಲ್ಲೂ ನನಗೆ ಆತ್ಮೀಯರಿದ್ದಾರೆ. ಅವರನ್ನೆಲ್ಲ ಒಂದು ಕಡೆ ಸೇರಿಸಿ ನನ್ನೊಂದಿಗಿನ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದು ಕೋರಲು ಈ ಸಭೆ ಕರೆದಿದ್ದೇನೆ. ನಾನು ಯಾವುದೇ ಪಕ್ಷಕ್ಕೆ ಹೋಗಲಿ, ಯಾರನ್ನೂ ಬಲವಂತದಿಂದ ಬಾ ಎನ್ನುವುದಿಲ್ಲ. ನನ್ನ ಅಭಿಮಾನಿಗಳನ್ನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದರೆ ತಡೆಯುವವನೂ ನಾನಲ್ಲ. ಎಲ್ಲರಿಗೂ ತಮ್ಮದೇ ಅಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯವಿದೆ. ಎಂದಿಗೂ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹೀಗೆ ಇರಲಿ ಎಂದು ಆಶಿಸುತ್ತೇನೆ ಎಂದರು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ಡಿ.ಕೆ. ಕುನ್ನೇಗೌಡ, ನಗರಸಭಾಧ್ಯಕ್ಷೆ ಗೀತಾ ನಿಂಗರಾಜು, ಸದಸ್ಯರಾದ ಸತೀಶ್‌ಕುಮಾರ್‌, ಶರವಣ, ಕೃಷ್ಣರಾಜ ಗುಪ್ತ, ಹರೀಶ್‌, ಮುಖಂಡರಾದ ಬಸವಣ್ಣ, ಪುಟ್ಟಮ್ಮ, ಸುನೀತಾ ಜಯರಾಮೇಗೌಡ, ವಾಸೇಗೌಡ, ಶಿವಶೇಖರ್‌, ಪ್ರಾಣೇಶ್‌ಶೆಟ್ಟಿ, ಫಯಾಜ್‌, ಪ್ರಸನ್ನ, ಗೋವಿಂದೇಗೌಡ, ಸ್ವಾಮಿ, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಸತ್ಯಪ್ಪ, ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಇದ್ದರು.

Member of Legislative Council H. Vishwanath