ಚಿಕ್ಕಮಗಳೂರು: ಕಳೆದ 2009 ರಿಂದ 2021 ರವರೆಗೆ ತಾಲ್ಲೂಕಿನ ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಸುಮಾರು 6 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಗೊಳಿಸುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಸಿ.ಟಿ ರವಿ ಹೇಳಿದರು.

ನಿಡಘಟ್ಟ ಗ್ರಾಮಪಂಚಾಯಿತಿಯ ನೀರುಗಂಡಿ ತಾಂಡ್ಯದಿಂದ ದಾಸರಹಟ್ಟಿ ಮಾರ್ಗದ ಹೂವಿನಹಳ್ಳಿ ತಾಂಡ್ಯ ರಸ್ತೆ ಅಭಿವೃದ್ಧಿ ಕಾಮಗಾರಿ, ನೀರುಗಂಡಿ-ಗದ್ದೆಮನೆಗೆ ಸಂಪರ್ಕ ರಸ್ತೆ, ಮತ್ತು ಟಿ.ಬಿ. ಕಾವಲ್ ರಸ್ತೆಯಿಂದ ಚಟ್ನಳ್ಳಿ ಮಾರ್ಗದ ಆಂಜನೇಯ ಸ್ವಾಮಿ ದೇವಾಲಯ ರಸ್ತೆ ಅಭಿವೃದ್ಧಿ ಕಾಮಗಾರಿ ಒಳಗೊಂಡಂತೆ ಸುಮಾರು 5.50 ಕೋಟಿ ಅನುದಾನದ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

2019  ರಿಂದ 2021  ರವರೆಗೆ ನಿಡಘಟ್ಟ ಗ್ರಾಮ ಪಂಚಾಯಿತಿಗೆ ರಸ್ತೆ, ಸಮುದಾಯ ಭವನ, ಬೀರೇಶ್ವರ ಭವನ, ಯಾತ್ರಿ ನಿವಾಸ, ಒಳಗೊಂಡAತೆ ಹಲವು ಕಾಮಗಾರಿಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಸುಮಾರು 6 ಕೋಟಿಗೂ ಹೆಚ್ಚು ಅನುದಾನ ಬಿಡಗಡೆಗೊಳಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಕ್ಷೇತ್ರದ ಜನರು ಕೊಟ್ಟ ಶಾಸಕನ ಅಧಿಕಾರವನ್ನು ಅಭಿವೃದ್ಧಿ ಕಾರ್ಯಗಳಿಗೆ ಸದುಪಯೋಗ ಮಾಡಿಕೊಳ್ಳಲಾಗಿದೆ ಎಂದರು.

ನಿಡಘಟ್ಟ ಕ್ರಾಸ್‌ನ ಜೋಡಿ ಹೋಚಿಹಳ್ಳಿ ಜಕ್ಷನ್ ಬಳಿ 1.20  ಕೋಟಿ ವೆಚ್ಚದಲ್ಲಿ ಬಸ್‌ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿ ಮಂಜೂರಾತಿ ದೊರಕಿಸಿದ್ದು ಸಾರಿಗೆ ಸಚಿವರಿಂದ ಶೀಘ್ರದಲ್ಲಿ ಭೂಮಿ ಪೂಜೆ ಮಾಡಲಾಗುವುದು ಎಂದು ಭರವಸೆ ನೀಡಿದರು

ಜಿಲ್ಲೆಯ ಮಹತ್ವದ ಯೋಜನೆಗಳಲ್ಲಿ ಒಂದಾದ ೧೨೮೧ ಕೋಟಿ ವೆಚ್ಚದಲ್ಲಿ ಭದ್ರಾ ಉಪಕಣಿವೆಯಿಂದ ಜಿಲ್ಲೆಯ ಕಡೂರು, ತರೀಕೆರೆ, ಚಿಕ್ಕಮಗಳೂರು ಭಾಗದ ಲಕ್ಯಾ, ಸಖರಾಯಪಟ್ಟಣ ಭಾಗಗಳಿಗೆ ೧೯೭ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶೀಘ್ರವೇ ಮುಖ್ಯಮಂತ್ರಿಗಳಿಂದ ಮೊದಲ ಹಂತದ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಯೋಜನೆ ಮೂಲಕ ಪ್ರತಿ ಮನೆಗೂ ನಲ್ಲಿ ಸಂಪರ್ಕದ ಮೂಲಕ ನೀರು ಒದಗಿಸುವುದಾಗಿದ್ದು ರೂ. 630  ಕೋಟಿ ವೆಚ್ಚದಲ್ಲಿ ಭದ್ರಾ ಉಪಕಣಿವೆ, ಪರ್ಯಾಯವಾಗಿ ಅಯ್ಯನಕೆರೆಯಿಂದ  ನೀರು ಒದಗಿಸುವ ಯೋಜನೆ ರೂಪಿಸಿದ್ದು ನಬಾರ್ಡ್‍ನಿಂದ  ಕ್ರಿಯಾಯೋಜನೆ ಸಲ್ಲಿಸಿದ್ದು ನವೆಂಬರ್ ಅಂತ್ಯದೊಳಗೆ ಅನುಮೋದನೆ ದೊರೆಯಲಿದೆ ಎಂದು ಸ್ಪಷ್ಟನೆ ನೀಡಿದರು.

ಜಿಲ್ಲಾಪಂಚಾಯಿತಿ ಮಾಜಿ ಉಪಾಧ್ಯಕ್ಷ  ವಿಜಯ್‌ಕುಮಾರ್ ಮಾತನಾಡಿ ನಿಡಘಟ್ಟ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶಾಸಕರು ಶ್ರಮಿಸಿದ್ದಾರೆ. ಡಾಂಬಾರ್, ಕಾಂಕ್ರಿಟ್ ರಸ್ತೆ, ನಿರ್ಮಾಣ, ಕುಡಿಯುವ ನೀರು, ಸಮುದಾಯ ಭವನ ಒಳಗೊಂಡAತೆ ಹಲವು ಸೌಕರ್ಯಗಳನ್ನು ಒದಗಿಸಿ ವಿಪಕ್ಷಗಳು ಮೆಚ್ಚುವಂತೆ ಮಾಡಿದ್ದಾರೆ.

ಕೋವಿಡ್ ನಡುವೆಯೂ ಶಾಸಕರು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಶ್ರಮಿಸಿದ್ದಾರೆ ಎಂದು ಕೊಂಡಾಡಿದರು.

ಈ ಸಂದರ್ಭದಲ್ಲಿ ದೇವನೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರೇಣುಕಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ರವಿಕುಮಾರ್, ಲಕ್ಷ್ಮಣ್‍ ನಾಯ್ಕ್, ನಿಡಘಟ್ಟ ಗ್ರಾ.ಪಂ ಅಧ್ಯಕ್ಷೆ ಗೀತಾಂಜಲಿ, ಉಪಾಧ್ಯಕ್ಷೆ ಗೀತಾ ರಾಜಶೇಖರ್, ಸದಸ್ಯರಾದ ಸೋಮೇಶ್, ರಾಜಪ್ಪ, ಲಕ್ಷ್ಮಮ್ಮ,  ಶಂಕರಮೂರ್ತಿ, ವಿಶ್ವನಾಥ್, ಗೀತಾ, ಲಿಂಗರಾಜ್ ಸೇರಿದಂತೆ ಮತ್ತಿತರರು ಇದ್ದರು.

Road Works: ಎಸ್.ಬಿದರೆ ಪಂಚಾಯಿತಿ ವ್ಯಾಪ್ತಿಯಲ್ಲಿ 80 ಲಕ್ಷದ ರಸ್ತೆ ಕಾಮಗಾರಿಗೆ ಸಿ.ಟಿ.ರವಿ ಉದ್ಘಾಟನೆ