ಬೆಂಗಳೂರು: ಒರಿಸ್ಸಾದ ಕಟಕ್ ಜಿಲ್ಲೆಯ 63 ವರ್ಷ ವಯಸ್ಸಿನ ವೃದ್ಧ ವಿಧವೆಯೊಬ್ಬರು ತಮ್ಮ ಒಂದು ಕೋಟಿ ರೂಪಾಯಿ ಬೆಲೆ ಬಾಳುವ 3 ಅಂತಸ್ತಿನ ಮನೆ ಸೇರಿದಂತೆ ಇತರ ಆಸ್ತಿಗಳನ್ನು ರಿಕ್ಷಾ ಎಳೆಯುವ ವ್ಯಕ್ತಿಯೊಬ್ಬನಿಗೆ ದಾನ ಮಾಡಿರುವ ಕುತೂಹಲಕರ ಸಂಗತಿ ವರದಿಯಾಗಿದೆ. ಪತಿ ಹಾಗೂ ಪುತ್ರಿಯನ್ನು ಆರು ತಿಂಗಳ ಅವಧಿಯಲ್ಲಿ ಕಳೆದುಕೊಂಡು ನಿರಾಶ್ರಿತರಾದ ಮಿನಾತಿ ಪಟ್ನಾಯಿಕ್‌ರ ರಕ್ಷಣೆಗೆ ಅವರ ಯಾವ ಬಂಧುಗಳೂ ಮುಂದಾಗಲಿಲ್ಲ. ರಕ್ತದೊತ್ತಡದ ಸಮಸ್ಯೆಯೂ ಸಹ ಅವರನ್ನು ಬಾಧಿಸುತ್ತಿತ್ತು.

ಮಿನಾತಿ ಪಟ್ನಾಯಿಕ್‌ರೇ ಹೇಳುವಂತೆ ವ್ಯಾಪಾರೋದ್ಯಮಿಯಾಗಿದ್ದ ಅವರ ಪತಿ ಕೃಷ್ಣಕುಮಾರ್ ಪಟ್ನಾಯಿಕ್ ಜುಲೈ 2020ರಲ್ಲಿ ಮೂತ್ರಪಿಂಡಗಳ ವೈಫಲ್ಯದಿಂದ ನಿಧನರಾದರು. ಅದಾದ ಆರೇ ತಿಂಗಳಲ್ಲಿ ಅವರು ಪುತ್ರಿ ಕಮಲ್‌ಕುಮಾರಿ ಪಟ್ನಾಯಿಕ್ ಸಹ ಜನವರಿ 2021ರಲ್ಲಿ ಹೃದಯಾಘಾತದಿಂದ ಮೃತರಾದರು. ಪುತ್ರಿಯ ಅಂತ್ಯಕ್ರಿಯೆ ಮುಗಿದ ನಂತರ ಅವರ ಯೋಗ-ಕ್ಷೇಮವನ್ನು ವಿಚಾರಿಸಲೂ ಸಹ ಯಾವ ಬಂಧುಗಳು ಅವರನ್ನು ಸಂಪರ್ಕಿಸಲಿಲ್ಲ. ಮುಂದೇನು ಎಂಬ ಪ್ರಶ್ನೆ ಅವರನ್ನು ಕಾಡಲು ಪ್ರಾರಂಭಿಸಿದಾಗ ಅವರ ರಕ್ಷಣೆಗೆ ಧಾವಿಸಿದವರೇ ಅವರ ಕುಟುಂಬಕ್ಕೆ ಸುಮಾರು 25 ವರ್ಷಗಳಿಂದ ರಿಕ್ಷಾ ಎಳೆಯುವ ಸೇವೆ ನೀಡುತ್ತಿದ್ದ ಬುಧ ಸಮಲ್.  ಬುಧ ಸಮಲ್‌ ಇವರ ಕುಟುಂಬ ಸದಸ್ಯರಿಗೆ ಮಾತ್ರ ತಮ್ಮ ಸೇವೆ ನೀಡುತ್ತಿದ್ದರಲ್ಲದೇ ಅವರ ಮಗಳನ್ನು ಕಾಲೇಜಿಗೆ ಕರೆದುಕೊಂಡು ಹೋಗುವ ಹಾಗೂ ಅಲ್ಲಿಂದ ಕರೆತರುವ ಕೆಲಸವನ್ನೂ ಮಾಡುತ್ತಿದ್ದರು. ಒಡತಿಯ ಕಷ್ಟಕಾಲದಲ್ಲಿ ಅವರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಬುಧ ಹಾಗೂ ಅವರ ಕುಟುಂಬ.

ಆಸ್ತಿಯನ್ನು ಯಾವುದಾದರೂ ವೃದ್ಧಾಶ್ರಮಕ್ಕೋ ಅಥವಾ ಅನಾಥಾಲಯಕ್ಕೋ ದಾನ ಮಾಡುವಂತಹ ಸಲಹೆಗಳೂ ಬಂದವು. ಬುಧ ಸಮಲ್‌ರ ಹೆಸರಿಗೆ ಆಸ್ತಿ ಬರೆದರೆ ಶಾಶ್ವತವಾಗಿ ಸಂಬಂಧವನ್ನು ಕಡಿದುಕೊಳ್ಳುವ ಬೆದರಿಕೆಯನ್ನೂ ಒಡಹುಟ್ಟಿದ ಸಹೋದರಿಯರು ಹಾಕಿದರು. ಅದರೆ ಇದಾವುದಕ್ಕೂ ಬೆಲೆಕೊಡದ ಮಿನಾತಿ ಕಷ್ಟದ ಸಮಯದಲ್ಲಿ ತಮ್ಮ ಬೆಂಬಲಕ್ಕೆ ನಿಂತ ಬುಧ ಸಮಲ್‌ರಿಗೇ ತಮ್ಮ ಆಸ್ತಿಯನ್ನು ದಾನ ಮಾಡುವ ದೃಢ ನಿರ್ಧಾರಕ್ಕೆ ಬಂದರು. ತಮ್ಮ ಪತಿ ಹಾಗೂ ಮಗಳು ಬದುಕಿದ್ದಾಗ ಬುಧ ಸಮಲ್ ತಮ್ಮ ಕುಟುಂಬಕ್ಕೆ ಮಾಡಿರುವ ಸೇವೆಗೆ ಪ್ರತ್ಯಪಕಾರವಾಗಿ ಅವರ ಹೆಸರಿನಲ್ಲಿ ಸ್ವಲ್ಪ ಭೂಮಿಯನ್ನು ಕೊಂಡು ಅವರಿಗೆ ದಾನವಾಗಿ ನೀಡಬೇಕೆಂದು ಯೋಚಿಸಿದ್ದರು ಮಿನಾತಿ. ಆದರೆ ತಮ್ಮ ಕುಟುಂಬ ಸದಸ್ಯರನ್ನು ಕಳೆದು ಕೊಂಡು ಒಂಟಿಯಾದಾಗ ತಮ್ಮ ರಕ್ಷಣೆಗೆ ನಿಂತ ಬುಧ ಸಮಲ್‌ರಿಗೇ ಎಲ್ಲಾ ಆಸ್ತಿಯನ್ನೂ ದಾನ ಮಾಡುವ ನಿರ್ಧಾರಕ್ಕೆ ಬಂದ ಅವರು ಸೂಕ್ತ ಕಾನೂನು ಪ್ರಕ್ರಿಯೆಗಳ ಮೂಲಕ ಅದನ್ನು ಮಾಡಿದ್ದಾರೆ. ನನ್ನ ಕಷ್ಟದ ಸಮಯದಲ್ಲಿ ನನ್ನ ನೆರವಿಗೆ ನಿಂತಿದ್ದಕ್ಕಾಗಿ ಹೃದಯಪೂರ್ವಕವಾಗಿ ನಾನು ನನ್ನ ಸಂಪೂರ್ಣ ಆಸ್ತಿಯನ್ನು ದಾನ ಮಾಡುತ್ತಿದ್ದೇನೆಂದು ಮಿನಾತಿ ಹೇಳಿದ್ದಾರೆ.

ಪತ್ನಿ ಹಾಗೂ ಇಬ್ಬರು ಪುತ್ರರನ್ನು ಹೊಂದಿರುವ ಬುಧ ಸಮಲ್‌ ಹೀಗೆ ಹೇಳುತ್ತಾರೆ “ನಾನು ಕಳೆದ ಸುಮಾರು 25 ವರ್ಷಗಳಿಂದ ಈ ಕುಟುಂಬದ ಸಂಪರ್ಕ ಹೊಂದಿದ್ದು ಅವರ ಸೇವೆ ಸಲ್ಲಿಸಿದ್ದೇನೆ. ಇದು ನಾನು ನನ್ನ ಕನಸಿನಲ್ಲೂ ನಿರೀಕ್ಷಿಸದ ಕೊಡುಗೆಯಾಗಿದೆ. ನಾನು ಹಾಗೂ ನನ್ನ ಕುಟುಂಬವು ಅವರಿಗೆ ಅಭಾರಿಗಳಾಗಿದ್ದು ನಮ್ಮ ಕಡೆಯ ಉಸಿರಿರುವವರೆಗೂ ಅವರ ಸೇವೆ ಮಾಡುತ್ತೇವೆ.

ಮಾನವೀಯ ಮೌಲ್ಯಗಳೇ ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ ಇಂತಹ ಘಟನೆಗಳು ಸಮಾಜಕ್ಕೆ ಪ್ರೇರಣೆಯಾಗಿವೆ.

Woman donates her 1 crore worth property to a rickshaw puller who took care of her when her close relatives abandoned her

ಇದನ್ನೂ ಓದಿ: Heavy rain: ನವೆಂಬರ್ 20ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಧಿಕ ಮಳೆ

ಇದನ್ನೂ ಓದಿ: ಗಡಿಯಲ್ಲಿ ಕಟ್ಟೆಚ್ಚರ ವಹಿಸಲು ಭದ್ರತಾಪಡೆಗಳಿಗೆ ಸೂಚಿಸಿದ ರಕ್ಷಣಾ ಮಂತ್ರಿ ರಾಜನಾಥ ಸಿಂಗ್‌