ನವದೆಹಲಿ: ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಒದಗಿಸುವ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲೂ ಗುರುವಾರ ಅಂಗೀಕಾರವಾಯಿತು. ರಾಜ್ಯಸಭೆಯಲ್ಲಿ  215 ಮಂದಿ ಮಸೂದೆ ಪರ ಮತ ಚಲಾವಣೆ ಮಾಡಿದ್ದಾರೆ. ಮಸೂದೆ ವಿರುದ್ಧ ಯಾವುದೇ ಮತ ಬಂದಿಲ್ಲ.

ಇದರೊಂದಿಗೆ ಸಂಸತ್ತಿನ ಉಭಯ ಸದನಗಳಲ್ಲಿಯೂ ಮಸೂದೆ ಅಂಗೀಕಾರವಾಗಿದ್ದು, ಇನ್ನು ಮಸೂದೆ ಅಂಗೀಕಾರಕ್ಕೆ ರಾಷ್ಟ್ರಪತಿ ಅಂಕಿತ ಮಾತ್ರ ಬಾಕಿ ಉಳಿದಿದೆ. ಇದರೊಂದಿಗೆ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.

ಸುಮಾರು 11 ಗಂಟೆಗಳ ಚರ್ಚೆಯ ನಂತರ ರಾಜ್ಯಸಭೆಯು ಸರ್ವಾನುಮತದಿಂದ ಮಸೂದೆಯನ್ನು ಅಂಗೀಕರಿಸಿದೆ. ಈ ಮಸೂದೆಯನ್ನು ಲೋಕಸಭೆ ಬುಧವಾರ ಅಂಗೀಕರಿಸಿತ್ತು. ಈಗ ಸಂಸತ್ತಿನಲ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು  ಮೀಸಲಾತಿ ಕಾನೂನಾಗಿ ಪ್ರಕಾರವಾಗಿ ಸಿಗಲಿದೆ. ನೂತನ ಸಂಸತ್ ಭವನದಲ್ಲಿ ಅಂಗೀಕಾರಗೊಂಡ ಮೊದಲ ಮಸೂದೆ ಇದಾಗಿದೆ.

ಮೇಲ್ಮನೆಯಲ್ಲಿ ಮಸೂದೆ ಅಂಗೀಕರಿಸಿದ ನಂತರ ಮಾತನಾಡಿದ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ , ಇದು ಐತಿಹಾಸಿಕ ಸಾಧನೆಯಾಗಿದೆ ಎಂದು ಹೇಳಿದರು. ಹಿಂದೂ ಕ್ಯಾಲೆಂಡರ್ ಪ್ರಕಾರ ಇಂದು ಪ್ರಧಾನಿ ಮೋದಿಯವರ ಜನ್ಮದಿನವಾಗಿರುವುದು ಸಹ ಕಾಕತಾಳೀಯವಾಗಿದೆ ಎಂದರು. ನಂತರ ರಾಜ್ಯಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಧನಕರ್ ಮುಂದೂಡಿದರು.

Passage of Women’s Reservation Bill