ಬೆಂಗಳೂರು: ತಮ್ಮ ಸೊಸೆಯು ಸಾವಿಗೀಡಾಗಿದ್ದರಿಂದ ಅಮೆರಿಕಕ್ಕೆ ತೆರಳಲು ಹಿರಿಯ ನಾಗರಿಕ ದಂಪತಿಗಳು ದಾಖಲೆಯ ಸಮಯದಲ್ಲಿ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ (ಆರ್‌ಪಿಒ)ಯಿಂದ  ತಮ್ಮ ಪಾಸ್‌ಪೋರ್ಟ್‌ಗಳನ್ನು ಪಡೆದುಕೊಂಡಿದ್ದಾರೆ. ಆರ್‌ಪಿಒದ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಮೈಸೂರಿನ ನಿವಾಸಿಗಳಾದ 69 ವರ್ಷದ ವಿ.ಆರ್ ಶರ್ಮಾ ಮತ್ತು ನಿರ್ಮಲಾ ಶರ್ಮಾ (64) ಅವರು ಶುಕ್ರವಾರ ಬೆಳಿಗ್ಗೆ ತಮ್ಮ ಮಗನಿಂದ ನ್ಯೂಯಾರ್ಕ್‌ನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಸೊಸೆ ನಿಧನವಾಗಿರುವ ಆಘಾತಕಾರಿ ಸುದ್ದಿ ಪಡೆದರು.

ಅಮೆರಿಕಕ್ಕೆ ತೆರಳಲು ಟಿಕೆಟ್‌ಗಳನ್ನು ಕಾಯ್ದಿರಿಸಲು ಶರ್ಮಾ ತಮ್ಮ 10 ವರ್ಷಗಳ ಮಾನ್ಯತೆ ಹೊಂದಿರುವ ವೀಸಾ ಪಾಸ್‌ಪೋರ್ಟ್ ಅನ್ನು ನೋಡಿದ್ದಾರೆ. ಆದರೆ, ಅವಧಿ ಮುಗಿಯುವ ಹಂತದಲ್ಲಿದೆ ಎಂದು ತಿಳಿದು ದಿಗ್ಭ್ರಮೆಗೊಂಡಿದ್ದಾರೆ.

‘ನಮ್ಮ ಪಾಸ್‌ಪೋರ್ಟ್ 2023ರ ನವೆಂಬರ್‌ವರೆಗೆ ಮಾನ್ಯವಾಗಿದೆ ಮತ್ತು ನಾವು ಅದನ್ನು ಮುಂದಿನ ವರ್ಷ ನವೀಕರಿಸಬೇಕು ಎಂದುಕೊಂಡಿದ್ದೆವು. ಆದರೆ, ಇದೇ ವರ್ಷ ನವೆಂಬರ್‌ನಲ್ಲಿ ಅದರ ಅವಧಿ ಮುಗಿಯುತ್ತಿದೆ ಎಂಬುದನ್ನು ಗಮನಿಸಿ ನನಗೆ ಆಘಾತವಾಯಿತು. ಇದು ನಮ್ಮನ್ನು ಮೂಕವಿಸ್ಮಿತರನ್ನಾಗಿಸಿತು’ ಎಂದು ಅವರು ಟಿಎನ್ಐಇಗೆ ತಿಳಿಸಿದರು.

ಕುಟುಂಬದ ಸದಸ್ಯರು ತಕ್ಷಣ ಬೆಂಗಳೂರಿನ ಆರ್‌ಪಿಒ ಅವರನ್ನು ಇ-ಮೇಲ್ ಮೂಲಕ ಸಂಪರ್ಕಿಸಿದ್ದಾರೆ ಮತ್ತು ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.  ‘ಅವರ ಸೂಚನೆ ಮೇರೆಗೆ ನಾವು ಬೆಳಿಗ್ಗೆ ಮೈಸೂರಿನಿಂದ ಕಾರಿನಲ್ಲಿ ಹೊರಟು ಮಧ್ಯಾಹ್ನ 2.30ಕ್ಕೆ ಕೋರಮಂಗಲದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತಲುಪಿದೆವು. ನಮ್ಮ ಹಳೆಯ ಪಾಸ್‌ಪೋರ್ಟ್ ಮತ್ತು ಕೆಲವು ದಾಖಲೆಗಳನ್ನು ಸಲ್ಲಿಸಿದೆವು. ನಮ್ಮ ಹೆಬ್ಬೆರಳಿನ ಗುರುತುಗಳು ಮತ್ತು ಫೋಟೋಗಳನ್ನು ತೆಗೆದುಕೊಳ್ಳಲಾಯಿತು. ಸಂಜೆ 4 ಗಂಟೆಯ ವೇಳೆಗೆ ನಮ್ಮ ಪಾಸ್‌ಪೋರ್ಟ್‌ಗಳು ಕೈಗೆ ಬಂದವು’ ಎಂದು ಅವರು ಹೇಳಿದರು.

ದಂಪತಿ ಸಂಬಂಧಿಕರೊಂದಿಗೆ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಕೆ. ಕೃಷ್ಣ ಅವರನ್ನು ಭೇಟಿ ಮಾಡಿ ಸಹಾಯಕ್ಕಾಗಿ ಧನ್ಯವಾದ ಅರ್ಪಿಸಿದರು. ‘ನಾನು ಇದನ್ನು ಅತ್ಯುತ್ತಮ ಸೇವೆ ಎಂದು ಕರೆಯುತ್ತೇನೆ’. ತ್ವರಿತ ಪ್ರತಿಕ್ರಿಯೆಗಾಗಿ ಪಾಸ್‌ಪೋರ್ಟ್ ಕಚೇರಿ ಎಲ್ಲಾ ಪ್ರಶಂಸೆ ಮತ್ತು ಆಶೀರ್ವಾದಕ್ಕೆ ಅರ್ಹವಾಗಿದೆ ಎಂದು ನಿರ್ಮಲಾ ಹೇಳಿದರು.

Passport in 90 minutes