ಚಿಕ್ಕಮಗಳೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳ ಮತ್ತು ರಾಜಕೀಯ ಅಭ್ಯರ್ಥಿಗಳ ಕರಪತ್ರ, ಪೋಸ್ಟರ್‍ಸ್ ಮತ್ತು ಬ್ಯಾನರ್ ಗಳನ್ನು ಮುದ್ರಿಸುವ ಮೊದಲು ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಮುದ್ರಣ ಮಾಲೀಕರು, ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಹಾಗೂ ಲಿಕ್ಕರ್ ಶಾಪ್ ಮಾಲೀಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಯಾವುದೇ ರೀತಿಯ ಅಪಪ್ರಚಾರ, ಸುಳ್ಳು ಮಾಹಿತಿ, ಕೋಮುಗಲಭೆ, ಸೃಷ್ಟಿಸುವಂತಹ ಕರಪತ್ರ, ಪೋಸ್ಟರ್ ಮತ್ತು ಬ್ಯಾನರ್ ಗಳನ್ನು ಮುದ್ರಿಸಲು ಅವಕಾಶವಿರುವುದಿಲ್ಲ ಎಂದರು.

ಮುದ್ರಕರು ಪಾಂಪ್ಲೇಟ್‌ಗಳು, ಪೋಸ್ಟರ್‌ಗಳನ್ನು ಮುದ್ರಿಸುವ ಮೊದಲು ಪ್ರಕಾಶನದ ಗುರುತಿನ ಬಗ್ಗೆ ದೃಢೀಕರಣವನ್ನು ಇಬ್ಬರು ಅನುಮೋದಕರೊಂದಿಗೆ ಪಡೆದಿರಬೇಕು. ಗುರುತಿನ ದೃಢೀಕರಣವಿಲ್ಲದೆ ಮುದ್ರಣ ಮಾಡಬಾರದು. ಕರಪತ್ರದ ಕೆಳಗೆ ಮುದ್ರಕರ ಹೆಸರು ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು. ದಾಖಲೆ ಇಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಣ ಮಾಡಿದರೆ ಕ್ರಮ ಜರುಗಿಸಲಾಗುವುದು. ತಾವು ಮುದ್ರಿಸುವ ಒಂದು ಪ್ರತಿಯ ಮಾಹಿತಿಯನ್ನು ನಿಗಧಿತ ನಮೂನೆಯಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲೀಕರು, ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಯಾವುದೇ ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಮುದ್ರಣವಾಗುವ ಕರಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರವನ್ನು ಹಾಕಬಾರದು ಎಂದು ಸೂಚಿಸಿದರು.

ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಮಾಲೀಕರು ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಸಮಾರಂಭಗಳಿಗೆ ಅವಕಾಶ ನೀಡಬಾರದು. ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಗಳಿಗೆ ವಾಸ್ತವ್ಯಕ್ಕೆ ಬರುವವರ ಮಾಹಿತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು. ಗುಂಪುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸ್ತವ್ಯಕ್ಕೆ ಬಂದರೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸಿಸಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಆಳವಡಿಸಬೇಕು. ಆ ದಿನದ ವ್ಯಾಪಾರದ ವಹಿವಾಟುಗಳನ್ನು ದಾಖಲೆಗಳಲ್ಲಿ ನಮೂದಿಸಬೇಕು ಎಂದರು.

ಮುಕ್ತ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶ ಹೊಂದಿರುವ ಚುನಾವಣಾ ಆಯೋಗವು ಚುನಾವಣೆ ಸಮಯದಲ್ಲಿ ನಡೆಯುವ ಅಕ್ರಮಗಳ ಪತ್ತೆಗೆ ಹಾಗೂ ತಡೆಗೆ ಸೀವಿಜಲ್ ಆಪ್ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಚುನಾವಣೆ ಅಕ್ರಮಗಳ ಬಗ್ಗೆ ದೂರುಗಳಿದ್ದಲ್ಲಿ ಸೀವಿಜಲ್ ಆಪ್‌ಗೆ ಕರೆ ಮಾಡುವಂತೆ ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಗೆ ಅಥವಾ ಪಕ್ಷಕ್ಕೆ ಮತ ಹಾಕುವಂತೆ ಆಮಿಷಗಳನ್ನು ಒಡ್ಡಿದರೆ, ಹಣ, ಉಡುಗೊರೆ, ಕೂಪನ್‌ಗಳ ವಿತರಣೆ, ಮದ್ಯದ ಆಸೆ ತೋರಿದರೆ. ಮತದಾರರು ಸೀವಿಜಲ್ ಆಪ್ ಮೂಲಕ ದೂರು ನೀಡಬಹುದು. ಜೊತೆಗೆ ಮತದಾರರಿಗೆ ಅನುಮತಿ ಇಲ್ಲದಿದ್ದರು. ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಅಂಟಿಸುವುದು. ಆಸ್ತಿ ವಿರೂಪಗೊಳಿಸುವುದು, ಧಾರ್ಮಿಕ ಅಥವಾ ಕೋಮು ಪ್ರಚೋದಿತ ಭಾಷಣ ಮಾಡಿದರು ಆಪ್ ಮೂಲಕ ದೂರು ನೀಡಬಹುದು.

ಸಾರ್ವಜನಿಕರು ಪ್ಲೇ ಸ್ಟೋರ್‌ನಲ್ಲಿ ಸೀವಿಜಲ್ ಆಪ್ ಡೌನ್ ಲೋಡ್ ಮಾಡಿಕೊಂಡು ಬಳಸಬಹುದು. ಅಕ್ರಮಗಳ ಕುರಿತು ಛಾಯಾ ಚಿತ್ರ ಹಾಗೂ ವೀಡಿಯೋಗಳನ್ನು ಅಪ್ ಲೋಡ್ ಮಾಡಬಹುದು. ದೂರು ನೀಡುವ ಸಾರ್ವಜನಿಕರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುವುದು. ಸೀವಿಜಿಲ್‌ನಲ್ಲಿ ದಾಖಲಾಗುವ ದೂರುಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ಕಛೇರಿ, ಎಲ್ಲಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಪ್ರತ್ಯೇಕ ಸಿಬ್ಬಂದಿಗಳಿದ್ದಾರೆ.

ಸಾರ್ವಜನಿಕರು ಸೀವಿಜಲ್ ಆಪ್ ಮಾತ್ರವಲ್ಲದೇ ಉಚಿತ ಸಹಾಯವಾಣಿ ಸಂಖ್ಯೆ ೧೯೫೦ ಕ್ಕೆ ಕರೆ ಮಾಡಿ ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಬಹುದು. ಈ ಮೂಲಕ ಮುಕ್ತ, ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗದೊಂದಿಗೆ ಕೈ ಜೋಡಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಅಬಕಾರಿ ಉಪ ಆಯುಕ್ತರು ಸೆಲೀನಾ ಸಿ., ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ಲೋಹಿತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರಿಂಟಿಂಗ್ ಪ್ರೆಸ್ ಮಾಲೀಕರು, ಮದ್ಯದಂಗಡಿ ಮಾಲೀಕರು ಉಪಸ್ಥಿತರಿದ್ದರು.

Permission to print brochure-banner-poster is mandatory