ಬೆಂಗಳೂರು: ನಗರಗಳಲ್ಲಿ ಸ್ವಚ್ಚತೆ ಹಾಗೂ ನೈರ್ಮಲ್ಯವನ್ನು ಕಾಪಾಡುವುದು ಅತ್ಯವಶ್ಯಕವಾಗಿದೆ.  ನಗರಾಭಿವೃದ್ದಿಗೆ  ಹೆಚ್ಚು ಒತ್ತು ನೀಡಿ ತ್ಯಾಜ್ಯ ನೀರು ಸಂಸ್ಕರಣೆ, ಘನತ್ಯಾಜ್ಯ ವಿಲೇವಾರಿ ಹಾಗೂ ನಗರಗಳ ಸ್ವಚ್ಚತೆ ಕಡೆಗೆ ಹೆಚ್ಚಿನ ಆಧ್ಯತೆ ನೀಡುವುದು  ಅನಿವಾರ್ಯವಾಗಿದೆ  ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಪೌರಾಡಳಿತ ಇಲಾಖೆ ಏರ್ಪಡಿಸಿ ದ್ದ ‘ವಿಶ್ವ ಶೌಚಾಲಯ ದಿನ’ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಕಾರ್ಯಾಗಾರದಲ್ಲಿ ವರ್ಚುಯಲ್ ಆಗಿ ಪಾಲ್ಗೊಂಡು ಮಾತನಾಡಿದ ಸಚಿವರು, ದೇಶಾದ್ಯಂತ ಚಾಲನೆ ನೀಡಿರುವ ಅಮೃತ-2 ಹಾಗೂ ಸ್ವಚ್ಚ ಭಾರತ್ ಅಭಿಯಾನದ ಅಡಿ ಪ್ರತಿ ಮನೆಗೆ ಕುಡಿಯುವ ನೀರು,ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು, ಘನತ್ಯಾಜ್ಯ ಸಂಸ್ಕರಣೆ ಹಾಗೂ ಇತ್ಯಾದಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ  ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಮ್ಮ ದೇಶವು ಬಯಲು ಶೌಚ ಮುಕ್ತವಾಗಿಸುವ ನಿಟ್ಟಿನಲ್ಲಿ ಸ್ವಚ್ಚ ಭಾರತ ಮಿಷನ್ ನೆರವಾಗಲಿದ್ದು, ನಮ್ಮ ರಾಜ್ಯದ ನಗರ ಪ್ರದೇಶಗಳಲ್ಲಿ ಈವರೆಗೂ 3.2 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ಹಾಗೂ 16,640  ಸಮುದಾಯ ಶೌಚಾಲಯಗಳು ಹಾಗೂ 5407  ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ರಾಜ್ಯದ 80 ನಗರ ಸ್ಥಳೀಯ ಸಂಸ್ಥೆಗಳು ಯುಜಿಡಿ ವ್ಯವಸ್ಥೆ ಹೊಂದಿದ್ದು, 1, 929 ಎಂಎಲ್‍ಡಿ ಕೊಳಚೆ ನೀರನ್ನು ಸಂಸ್ಕರಿಸಲಾಗುತ್ತಿದೆ. ಯುಜಿಡಿ ಇಲ್ಲದ ನಗರಗಳಲ್ಲಿ ತ್ಯಾಜ್ಯ 165 ಕೆಎಲ್‍ಡಿ ಸಾಮರ್ಥ್ಯದ ಮಲ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.

ವಿಶ್ವಸಂಸ್ಥೆಯು “19 ನೇ ನವೆಂಬರ್ ಅನ್ನು ‘ವಿಶ್ವ ಶೌಚಾಲಯ ದಿನವೆಂದು’ ಘೋಷಿಸಿರುವ ಹಿನ್ನೆಲೆಯಲ್ಲಿ, ಸ್ವಚ್ಚತೆಯ ಮಹತ್ವವನ್ನು ಎಲ್ಲೆಡೆ ಸಾರುತ್ತಾ  ರಾಜ್ಯ,ದೇಶ ಹಾಗೂ ವಿಶ್ವವನ್ನು ಬಯಲು ಶೌಚ ಮುಕ್ತ ಪ್ರದೇಶವಾಗಿಸಲು  ಸತತ ಪ್ರಯತ್ನವನ್ನು ಮಾಡುತ್ತಾ ಹಲವು ರೀತಿಯ ತ್ಯಾಜ್ಯಗಳನ್ನು ವಿನೂತನ ತಂತ್ರಜ್ಞಾನದ ಮುಖಾಂತರ ಸಂಸ್ಕರಿಸುವ ಶಪಥ ಮಾಡಿ, ಸುಸ್ಥಿರ, ಸುಂದರ ಹಾಗೂ ಸ್ವಚ್ಚ ನಗರಗಳನ್ನು ಕಟ್ಟೋಣ ಎಂದು ಕರೆ ನೀಡಿದರು.

Priority is given to use of technology to maintain cleanliness in cities