ಚಿಕ್ಕಮಗಳೂರು: ಕವಿಗಳು ಸೃಷ್ಟಿಸುವ ಕಾವ್ಯವನ್ನು, ಸಾಹಿತ್ಯವನ್ನು ಜನರಿಗೆ ತಲುಪಿಸುವ ಮಹತ್ಕಾರ್ಯ ಗಾಯಕರದು; ಅಂಥ ಗಾಯನವೇ ಕವಿಗಳಿಗೆ ನೀಡುವ ಅತ್ಯಂತ ದೊಡ್ಡ ಗೌರವ ಎಂದು ಎಂ.ಎಲ್.ಎಂ.ಎನ್. ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ.ಜಿ.ಎಂ.ಗಣೇಶ್ ಅಭಿಪ್ರಾಯಪಟ್ಟರು.

ನಗರದ ಬೈಪಾಸ್ ರಸ್ತೆಯ ಎಂ.ಎಲ್.ಎಂ.ಎನ್. ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಸುವರ್ಣ ಸಂಭ್ರಮ -ಸಂತಸ ಸಂಗಮ ಶೀರ್ಷಿಕೆಯಡಿ ಆಯೋಜಿಸಿದ್ದ ಪೂರ್ವಿ ಗಾನಯಾನ ೯೪ನೇ ಸರಣಿಯ ‘ನವೋದಯ ಕಾವ್ಯ ಗಾಯನ ಹಾಗೂ ತರಬೇತಿ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಕನ್ನಡ ಸಾಹಿತ್ಯದ ಆರಂಭದ ಹಂತವೇ ನವೋದಯ ಸಾಹಿತ್ಯ. ಅನಂತರವಷ್ಟೆ ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಸಾಹಿತ್ಯಗಳ ಕಾಲಘಟ್ಟವನ್ನು ಗುರುತಿಸುತ್ತೇವೆ. ಅದರಲ್ಲೂ ಜನಮಾನಸದಲ್ಲಿ ಉಳಿದುಕೊಂಡಿರುವುದು ನವೋದಯ ಕಾಲಘಟ್ಟದ ಕಾವ್ಯಗಳು. ಸಾಹಿತ್ಯಕ್ಕೆ ನವೋದಯದ ಹೊಸರೂಪವನ್ನು ನೀಡಿದವರು ರಾಷ್ಟ್ರಕವಿ ಕುವೆಂಪು. ಅದೇ ಹಾದಿ ಅನುಸರಿಸಿದ ಬಿ.ಎಂ.ಶ್ರೀ ಇಂಗ್ಲೀಷ್ ಕವಿತೆಗಳನ್ನು ಬರೆಯುವ ಮೂಲಕ ನಮ್ಮ ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕು ಹಾಗೂ ಹೊಸ ದಾರಿಯನ್ನು ತೆರೆದುಕೊಟ್ಟವರು. ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ ಹೀಗೆ ಬಹಳಷ್ಟು ಕವಿಗಳು ಇದೇ ಹಾದಿಯಲ್ಲಿ ಸಾಗಿದ್ದಾರೆ ಎಂದರು.

ಸಂಪ್ರದಾಯದ ರೂಪದಲ್ಲಿದ್ದ ಸಾಹಿತ್ಯ ೨೦ನೇ ಶತಮಾನದ ಆರಂಭದಲ್ಲಿ ಒಂದು ಹೊಸ ರೂಪ ಪಡೆಯಿತು. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪಾಶ್ಚಾತ್ಯರ ಕೊಡುಗೆ ಬಹಳ ಮುಖ್ಯವಾಗಿ ಪ್ರೇರಣೆಯಾಯಿತು. ಇಂಗ್ಲೀಷ್ ಸಾಹಿತ್ಯವನ್ನು ಕೇವಲ ಅನುವಾದ ಮಾಡುವ ಮುಖಾಂತರ ಮಾತ್ರವಲ್ಲ, ಸ್ವತಂತ್ರವಾಗಿರುವ ಕೃತಿಗಳನ್ನು, ಕಾವ್ಯಗಳನ್ನು ರಚನೆ ಮಾಡುವುದರ ಮೂಲಕ ವಿವಿಧ ಪ್ರಕಾರದ ಸಾಹಿತ್ಯ ಹೊಸ ರೂಪವನ್ನು ಪಡೆದುಕೊಂಡು ಇಂದಿಗೂ, ಮುಂದೆಯೂ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು. ನಮ್ಮಲ್ಲಿ ಮಾನವೀಯ ಮೌಲ್ಯಗಳು, ಆದರ್ಶ ಪುರುಷರ ಮೌಲ್ಯಗಳು ಹಾಗೂ ಪರಿಸರಕ್ಕೆ ಸಂಬಂಧಿಸಿದ ಸಂಗತಿಗಳನ್ನು ಆಧರಿಸಿ ಭಾವನೆಗಳ ಸಂಸ್ಕಾರ ಆಗುವ ಹಾಗೆ ಸಾಹಿತ್ಯ ರಚನೆಯಾಗಿ ಕನ್ನಡ ಸಾಹಿತ್ಯ ಹಾಗೂ ಸಂಗೀತ ಉತ್ತಮವಾಗಿ ಬೆಳೆಯುವುದಕ್ಕೆ ಈ ಕಾಲಘಟ್ಟ ಬಹಳ ಮುಖ್ಯವಾಯಿತು ಎಂದು ಹೇಳಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್ ಮಾತನಾಡಿ, ಕನ್ನಡ ಸಂಸ್ಕೃತಿ ಇಂದು ವಿಶ್ವ ಸಂಸ್ಕೃತಿಗೆ ಮಾದರಿಯಾಗಿದೆ. ಇದರಲ್ಲಿ ಸಾಹಿತ್ಯದ ಪಾತ್ರ ಎಷ್ಟಿದೆಯೋ ಸಂಗೀತಗಾರರ ಪಾತ್ರವೂ ಅಷ್ಟೇ ಇದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಕನ್ನಡದ ಶ್ರೇಷ್ಟ ಕವಿ ಪು.ತಿ.ನರಸಿಂಹಾಚಾರ್ ಹೇಳುವಂತೆ ಹಾಡು ಬರೆದವರದಲ್ಲ. ಕೇಳುವವರದು. ಹಾಡು ಬರೆದ ಕೂಡಲೇ ಅದು ಲೋಕ ವಿಖ್ಯಾತವಾಗುವುದಿಲ್ಲ. ಅದು ಒಬ್ಬ ಶ್ರೇಷ್ಟ ಗಾಯಕನ ಕೈಗೆ ಸಿಕ್ಕಿ ಸ್ವರ ಸಂಯೋಜನೆ ಮಾಡಿ ಗಾಯನವಾಗಿ ರೂಪುಗೊಂಡಾಗ ಅದು ವಿಶ್ವ ವಿಖ್ಯಾತವಾಗುತ್ತದೆ ಎಂದರು.

ಸುಗಮ ಸಂಗೀತದ ಮೂಲ ಪರಂಪರೆಯಲ್ಲಿ ಬಾಳಪ್ಪ ಹುಕ್ಕೇರಿ, ಪಿ.ಕಾಳಿಂಗರಾವ್, ಮೈಸೂರು ಅನಂತಸ್ವಾಮಿಯವರು ಸೇರಿದಂತೆ ಅನೇಕರು ಬಂದಿದ್ದಾರೆ. ಇಂದು ಸಂಗೀತ ಕಾರ್ಯಕ್ರಮಕ್ಕೆ ಸಾಕಷ್ಟು ಜನರು ಸೇರಬೇಕೆಂದರೆ ಒಂದೋ ಅದು ರಾಕ್ ಸಂಗೀತವಾಗಿರಬೇಕು ಇಲ್ಲವೆ ಪಾಪ್ ಸಂಗೀತವಾಗಿರಬೇಕು. ಆದರೆ ಕನ್ನಡದ ಸಂಗೀತ ಕಾರ್ಯಕ್ರಮಗಳಿಗೆ ಸಾಕಷ್ಟು ಜನ ಸೇರುತ್ತಾರೆ ಎನ್ನುವುದನ್ನು ಬೆಂಗಳೂರಿನ ಬಸವನಗುಡಿ ಮೈದಾನದಲ್ಲಿ ದಾಖಲೆಯ ಕಾರ್ಯಕ್ರಮ ನಡೆಸಿ ನಿರೂಪಿಸಿದವರು ಕನ್ನಡದ ಸ್ವರ ಮಾಂತ್ರಿಕ ಡಾ.ಸಿ.ಅಶ್ವತ್ಥ್ ಅವರು ಎಂದು ಹೇಳಿದರು.

ತತ್ವಪದ ಎಂದ ಕೂಡಲೇ ನೆನಪಾಗುವುದು ಸಂತ ಶಿಶುನಾಳ ಷರೀಫರು. ಷರೀಫರ ಬಗ್ಗೆ ಕವಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಅಧ್ಯಯನ ಮಾಡಿದರು. ಡಾ.ಸಿ.ಅಶ್ವತ್ಥ್ ಸ್ವರ ಸಂಯೋಜನೆ ಮಾಡಿ, ಈ ಗೀತೆಗಳು ಜನಪ್ರಿಯವಾದವು ಎಂದು ಹೇಳಿದರು.

ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಸಂಗೀತದ ಅಭಿರುಚಿ ಬೆಳೆಸಲು ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಹಮ್ಮಿಕೊಂಡಿರುವ ನವೋದಯ ಕಾವ್ಯ ಗಾಯನ ಹಾಗೂ ತರಬೇತಿ ಶಿಬಿರ ಉಪಯುಕ್ತ ಕಾರ್ಯಕ್ರಮ ಎಂದರು.

ಮಲೆನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಕೇಶವಮೂರ್ತಿ ಮಾತನಾಡಿ, ಸಂಗೀತ ಮನಸ್ಸಿನ ಒತ್ತಡವನ್ನು ನಿವಾರಿಸಿ ಮುದ ನೀಡುತ್ತದೆ. ಇಂಥ ಕಾರ್ಯಕ್ರಮಗಳು ಆಗಿಂದಾಗ್ಗೆ ನಡೆಯುತ್ತಿರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಸುಧೀರ್ ಸ್ವಾಗತ, ಗಾಯಕ ರಾಯನಾಯಕ್ ವಂದನಾರ್ಪಣೆ, ಸುಮಾ ಪ್ರಸಾದ್ ಕಾರ್ಯಕ್ರಮ ನಿರೂಪಣೆ ನೆರವೇರಿಸಿದರು.

ಕಾವ್ಯ ಗಾಯನದಲ್ಲಿ ಎಂ.ಎಸ್.ಸುಧೀರ್, ರಾಯನಾಯಕ್, ದರ್ಶನ್, ರುಕ್ಸಾನ ಕಾಚೂರ್, ರಮ್ಯ ಮಧುಸೂದನ್, ಸುಂದರಲಕ್ಷ್ಮೀ, ಪೃಥ್ವಿಶ್ರೀ ಎಸ್.ಕೆ. ಹಾಗೂ ಶಿಬಿರಾರ್ಥಿಗಳು ವೈವಿಧ್ಯಮಯ ಗೀತಗಾಯನದಲ್ಲಿ ಭಾಗವಹಿಸಿ ರಂಜಿಸಿದರು.

Purvi Ganayana 94th Series ‘Navodaya Kavya Gayana and Training Camp’