ಬೆಂಗಳೂರು:  ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರಬೇಕೆಂಬ ಕಾರಣಕ್ಕಾಗಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ರಾಜ್ಯದಲ್ಲಿ ಒಟ್ಟು 41 ಸಾರ್ವಜನಿಕ ಸಮಾವೇಶ, 12 ರೋಡ್‌ ಶೋ ನಡೆಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ರಾಜ್ಯ ನಾಯಕರ ಜತೆಗೂಡಿ ಕೇಂದ್ರ ನಾಯಕರು ವಿವಿಧ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಿ ಜನರನ್ನು ಸೆಳೆಯುವ ಕೆಲಸ ಮಾಡಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್‌ನಿಂದ ಸಮಾವೇಶಗಳನ್ನು ಆಯೋಜಿಸಲಾಗಿದ್ದು, ಮಾರ್ಚ್‌ 20ರಂದು ಬೆಳಗಾವಿಯಲ್ಲಿ ನಡೆದ ಯುವ ಕ್ರಾಂತಿ ಸಮಾವೇಶದ ಮೂಲಕ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಚಾರ ಆರಂಭಿಸಿದರು. ಅದಾದ ನಂತರ ಏ.16ರಂದು ಕೋಲಾರದಲ್ಲಿ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದರು. ಅದಾದ ನಂತರದಿಂದ ರಾಮದುರ್ಗ, ವಿಜಯಪುರ, ತೀರ್ಥಹಳ್ಳಿ, ಸಾಗರ, ಚಿಕ್ಕೋಡಿ, ಕುಷ್ಟಗಿ, ಜೇವರ್ಗಿ, ಚಾಮರಾಜನಗರ, ಅರಸೀಕೆರೆ, ತುರುವೇಕೆರೆ, ಆನೇಕಲ್‌, ಪುಲಕೇಶಿನಗರ, ಶಿವಾಜನಗರ, ಹರಿಹರ ಸೇರಿ ಒಟ್ಟು 14 ಸಾರ್ವಜನಿಕ ಸಭೆ ಹಾಗೂ ಬಳ್ಳಾರಿ, ಹರಿಹರ, ಚಿಕ್ಕಮಗಳೂರು ಸೇರಿ 4 ಕ್ಷೇತ್ರಗಳಲ್ಲಿ ರೋಡ್‌ ಶೋ ನಡೆಸಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ರಾಜ್ಯ ನಾಯಕರನ್ನು ಹೊರತುಪಡಿಸಿ ಉಳಿದ ನಾಯಕರಿಗಿಂತ ಹೆಚ್ಚಿನ ಸಾರ್ವಜನಿಕ ಸಮಾವೇಶ, ರೋಡ್‌ ಶೋ ನಡೆಸಿದ್ದಾರೆ. ಏ.26ರಂದು ಮೈಸೂರು, ಶೃಂಗೇರಿಗಳಲ್ಲಿ ಸಮಾವೇಶ ನಡೆಸುವ ಮೂಲಕ ತಮ್ಮ ಪ್ರಚಾರ ಕಾರ್ಯವನ್ನು ಆರಂಭಿಸಿದ್ದರು. ಅದಾದ ನಂತರ ಚಿತ್ರದುರ್ಗ, ಕೊಪ್ಪಳ, ಮಳವಳ್ಳಿ, ಕೆ.ಆರ್‌.ಪೇಟೆ, ಶ್ರೀರಂಗಪಟ್ಟಣ, ನಾಗಮಂಗಲ, ಬಸವನಗುಡಿ, ಹಳಿಯಾಳ ಸೇರಿ 26 ಕಡೆ ಸಾರ್ವಜನಿಕ ಸಮಾವೇಶ ನಡೆಸಿ ಮತದಾರರನ್ನು ಸೆಳೆಯುವ ಕೆಲಸ ಮಾಡಿದರು. ಅದೇ ರೀತಿ ಹೊಸಕೋಟೆ, ಕಲಬುರಗಿ, ವಿಜಯನಗರ ಸೇರಿ 8 ಕಡೆ ರೋಡ್‌ ಶೋ ಮೂಲಕ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿದ್ದಾರೆ.
ಚುನಾವಣಾ ಪ್ರಚಾರದಿಂದ ದೂರವೇ ಉಳಿದಿದ್ದ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಒಂದೇ ಒಂದು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಮೇ 7ರಂದು ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು, ಕಾಂಗ್ರೆಸ್‌ ಗೆಲ್ಲಿಸುವಂತೆ ಕೋರಿದ್ದರು.

ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರ ಎದುರಿಸುತ್ತಿರುವ ಮೊದಲ ಚುನಾವಣೆಯಾಗಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ರಾಜ್ಯದ 25 ಕ್ಷೇತ್ರಗಳಲ್ಲಿ ಸಮಾವೇಶ ನಡೆಸಿ, ಬಸವನಗುಡಿಯಲ್ಲಿ ಮಾತ್ರ ರೋಡ್‌ ಶೋ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ 107 ಸಮಾವೇಶ ಹಾಗೂ 42 ರೋಡ್‌ ಶೋ ನಡೆಸಿ ಮತದಾರರನ್ನು ಸೆಳೆಯುವ ಕೆಲಸ ಮಾಡಿದ್ದಾರೆ. ಅದರಲ್ಲಿ ಡಿ.ಕೆ.ಶಿವಕುಮಾರ್‌ 57 ಸಮಾವೇಶ ಮತ್ತು 35 ರೋಡ್‌ ಶೋ ಹಾಗೂ ಸಿದ್ದರಾಮಯ್ಯ 50 ಸಮಾವೇಶ ಮತ್ತು 7 ರೋಡ್‌ ಶೋ ಮಾಡಿದ್ದಾರೆ.

Rahul-Priyanka 41 rally 12 road show