ಚಿಕ್ಕಮಗಳೂರು: ಇಲ್ಲಿನ ದಿ ಮೋಟಾರ್ ಸ್ಪೋಟ್ಸ್ ಕ್ಲಬ್ ವತಿಯಿಂದ ಮೇ ೪ ಮತ್ತು ೫ ರಂದು “ರ್‍ಯಾಲಿ ಆಫ್ ಚಿಕ್ಕಮಗಳೂರು” ಹೆಸರಿನಲ್ಲಿ ದ್ವಿಚಕ್ರ ವಾಹನ ರ್‍ಯಾಲಿ ಏರ್ಪಡಿಸಲಾಗಿದೆ ಎಂದು ಮೋಟಾರ್ ಸ್ಪೋಟ್ಸ್ ಕ್ಲಬ್ ಕಾರ್ಯದರ್ಶಿ ಅಭಿಜಿತ್ ಪೈ ತಿಳಿಸಿದರು

ಅವರು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಇದು ೨ನೇ ಸುತ್ತಿನ ನ್ಯಾಷನಲ್ ರ್‍ಯಾಲಿ ಚಾಂಪಿಯನ್ ಸ್ಪರ್ಧೆಯಾಗಿದ್ದು ಈ ರ್‍ಯಾಲಿಯನ್ನು ಎಂಆರ್‌ಎಫ್ ಟೈರ್‍ಸ್, ಟಿವಿಎಸ್, ಅಪಾಚಿ, ಮಾನ್‌ಸ್ಟರ್ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಡೆಯುತ್ತಿದ್ದು ವ್ಯಾಮ್ಸಿ ಮೆರ್‍ಲಾ ಸ್ಪೋಟ್ಸ್ ಫೌಂಡೇಷನ್ ಸಹ ಪ್ರಾಯೋಜಕರಾಗಿದ್ದಾರೆ ಎಂದು ಹೇಳಿದರು.

ಈ ರ್‍ಯಾಲಿಯು ಮೇ೪ ರಂದು ಸಂಜೆ ೪.೩೦ಕ್ಕೆ ನಗರಕ್ಕೆ ಸಮೀಪದ ಅಲ್ಲಂಪುರದಲ್ಲಿರುವ ಸೆವೆನ್ ಇವೆನ್ ರೆಸಾರ್ಟ್‌ನಲ್ಲಿ ವಿದ್ಯುಕ್ತವಾಗಿ ಆರಂಭವಾಗಲಿದ್ದು ವಸಂತಕೂಲ್ ಎಸ್ಟೇಟ್, ಸಾನೆಹಡ್ಲು, ಪಾಳ್ಯ ಎಸ್ಟೇಟ್‌ನಲ್ಲಿ ೩ ಭಾರಿ ೯ ಹಂತಗಳಲ್ಲಿ ರ್‍ಯಾಲಿ ನಡೆಯಲಿದ್ದು ಒಟ್ಟು ರ್‍ಯಾಲಿಯು ೧೪೦ ಕಿ.ಮೀ ವ್ಯಾಪ್ತಿಯಲ್ಲಿ ನಡೆಯಲಿದೆ

ಭಾನುವಾರ ಬೆಳಗ್ಗೆ ೭ ಗಂಟೆಗೆ ಆರಂಭವಾಗಿ ಸಂಜೆ ಮುಕ್ತಾಯಗೊಳ್ಳಲಿದೆ. ಅದೇ ಸ್ಥಳದಲ್ಲಿ ಅಂತಿಮ ಬಹುಮಾನ ನೀಡಲಾಗುವುದೆಂದು ತಿಳಿಸಿದರು.

ಈ ರ್‍ಯಾಲಿಯಲ್ಲಿ ವಿವಿಧ ಮಾದರಿಯ ಬೈಕ್‌ಗಳು, ಸ್ಕೂಟರ್‌ಗಳು, ಪ್ರತ್ಯೇಕ ವಿಭಾಗಗಳನ್ನು ವ್ಯವಸ್ಥೆ ಮಾಡಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ರ್‍ಯಾಲಿ ನಡೆಯಲಿದ್ದು ೩ ವಿಭಾಗಗಳನ್ನು ನಿಗಧಿಪಡಿಸಲಾಗಿದೆ ಎಂದರು.

ರಾಷ್ಟ್ರೀಯ ಸ್ಪರ್ಧೆಗಳಿಗೆ ಹಾಗೂ ಕರ್ನಾಟಕ ಸ್ಪರ್ಧಿಗಳು ಮತ್ತು ಜಿಲ್ಲೆಯ ಸ್ಪರ್ಧಿಗಳನ್ನು ಪ್ರೋತ್ಸಾಹಿಸಲು ಚಿಕ್ಕಮಗಳೂರು ಚಾಂಪಿಯನ್ಸ್ ಎಂಬ ೩ ವಿಭಾಗಗಳನ್ನು ಪ್ರಾರಂಭಿಸಿದ್ದು ಪ್ರತಿ ವಿಭಾಗಕ್ಕೆ ೩ ಬಹುಮಾನ ನೀಡಲಾಗುವುದು ಮೊದಲ ಬಹುಮಾನ ೯೯೯೯ ರೂ, ದ್ವಿತೀಯ ೭೫೦೦ ರೂ ಹಾಗೂ ತೃತೀಯ ಬಹುಮಾನ ೫೦೦೦ ರೂ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದೆಂದು ತಿಳಿಸಿದರು.

ಈ ರ್‍ಯಾಲಿಯಲ್ಲಿ ಭಾಗವಹಿಸಲು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ೫೯೦೦ ರೂ ಸ್ಥಳೀಯ ಮತ್ತು ಕರ್ನಾಟಕ ಚಾಂಪಿಯನ್‌ಶಿಪ್‌ಗೆ ೨೯೦೦ ರೂ ಪ್ರವೇಶ ಶುಲ್ಕ ನಿಗಧಿ ಪಡಿಸಿದ್ದು ಒಟ್ಟು ೯೫ ರಿಂದ ೧೦೦ ಮಂದಿ ಸ್ಪರ್ಧಿಸುವ ನಿರೀಕ್ಷೆ ಇದ್ದು ಈಗಾಗಲೇ ೮೮ ಮಂದಿ ಪುರುಷರು, ೯ ಮಂದಿ ಮಹಿಳೆಯರು ಖಚಿತಪಡಿಸಿ ನೊಂದಾಯಿಸಿಕೊಂಡಿದ್ದಾರೆಂದು ಹೇಳಿದರು.

ಈ ರ್‍ಯಾಲಿಯಲ್ಲಿ ಪ್ರಮುಖವಾಗಿ ಪುರುಷ ವಿಭಾಗದಲ್ಲಿ ರಾಜೇಂದ್ರ ಆರ್.ಈ, ನಟರಾಜ್ .ಆರ್, ಯುವರಾಜ್ ಮುಂತಾದವರು ಭಾಗವಹಿಸಲಿದ್ದಾರೆ ಅದೇ ರೀತಿ ಮಹಿಳಾ ವಿಭಾಗದಲ್ಲಿ ಐಶ್ವರ್ಯ ಪಿಚೈ, ತನಿಕ ಶಾನುಬೋಗ್, ಸೌಮ್ಯ ಚೌಧರಿ, ಇಷಿತಾ ಗುಪ್ತಾ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುರಕ್ಷತೆಗಾಗಿ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗಿದೆ. ವಿಜೇತರು ಆಕರ್ಷಕ ಟ್ರೋಫಿಗಳೊಂದಿಗೆ ೨.೦೫ ಲಕ್ಷರೂ ನಗದು ಬಹುಮಾನ ಗೆಲ್ಲಲಿದ್ದಾರೆಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮೋಟಾರ್ ಸ್ಪೋಟ್ಸ್ ಕ್ಲಬ್‌ನ ಮುಖ್ಯಸ್ಥರುಗಳಾದ ಜಯಂತ್ ಪೈ, ದಿಲೀಪ್, ಸಮೃದ್ ಪೈ, ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.

“Rally of Chikkamagaluru” on 4th and 5th May.